ಭಾರತ ಸ್ವತಂತ್ರವಾದಾಗ ಕನ್ನಡ ನಾಡು ಆಡಳಿತದ ಅನುಕೂಲಕ್ಕಾಗಿ ಬ್ರಿಟಿಷರ ಕೈಗೊಂಬೆಯಾಗಿ ತನ್ನ ಅಸ್ತಿತ್ವ ಕಳೆದುಕೊಂಡಿತು. ಮತ್ತೆ ಹೋರಾಟ, ಚಳುವಳಿ, ಮುಷ್ಕರ, ಪ್ರತಿಭಟನೆ ಎಂದು ಸಮಯ, ಶ್ರಮ, ತ್ಯಾಗ ಮಾಡಬೇಕಾಯಿತು. ಸ್ವಾತಂತ್ರö್ಯ ಹೋರಾಟದ ಅದೇ ಮುಳ್ಳಿನ ಹಾದಿಯನ್ನು ನಮ್ಮ ನಾಡಿನಲ್ಲಿ ತುಳಿಯಬೇಕಾಯಿತು. ೧೯೫೬ರಲ್ಲಿ ಹೋರಾಟಗಾರರ, ಸಾಹಿತಿಗಳ, ಕವಿಗಳ, ರಾಜಕೀಯ ಧುರೀಣರ ಪ್ರಯತ್ನಗಳು ಫಲ ಕಂಡದ್ದು ಮೈಸೂರು ರಾಜ್ಯದ ಉದಯವಾದಾಗ. ಒಡೆದು ಹೋಳಾಗಿದ್ದ ನಾಡು ಮತ್ತೆ ಒಗ್ಗೂಡಿದ್ದು ಈ ಭಾಷಾವಾರು ಪ್ರಾಂತ್ಯದ ಪರಿಕಲ್ಪನೆಯಿಂದಾಗಿ. ನಮ್ಮ ನಾಡಿಗೆ ಪೂರ್ಣ ಚಿತ್ರಣ ಲಭಿಸುವಂತೆ ಮಾಡಿದ್ದು ಭಾಷೆಯ ಆಧಾರದಲ್ಲಿ. ಇನ್ನು ಕನ್ನಡ ಭಾಷೆ, ಇತಿಹಾಸದ ಬಗ್ಗೆ ಮತ್ತೆ ಮತ್ತೆ ಕನ್ನಡಿಗರಿಗೆ ನೆನಪಿಸುವ ಅವಶ್ಯಕತೆಯೂ ಇಲ್ಲ. ನಾವು ಜೀವಿಸುತ್ತಿರುವ ನಾಡು, ಆಡುತ್ತಿರುವ ಭಾಷೆಯ ಮಹತ್ವದ ಅರಿವಿರದ ನಾವು ರಾಜ್ಯೋತ್ಸವದ ಸಂಭ್ರಮಕ್ಕೆ ಅರ್ಹರೇ ? ಪ್ರತಿಯೊಬ್ಬರೂ ಆಲೋಚಿಸಬೇಕಾದ ವಿಚಾರ.

ಕನ್ನಡಪರ ಮನಸ್ಸುಗಳು ತಮ್ಮದೇ ನಾಡಿನಲ್ಲಿ ಪರಕೀಯ ಭಾವದಿಂದ ನರಳುವಂತಾಗಿದ್ದು ಯಾರಿಂದ ? ಕನ್ನಡ ಭಾಷೆಯನ್ನು ಮಾತನಾಡುವವರು ಸಮಾಜದ ಕಡೆಗಣನೆಗೆ ಈಡಾಗುತ್ತಿರುವುದು ಯಾವ ಕಾರಣದಿಂದ ? ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ಆಂಗ್ಲ ಮಾಧ್ಯಮದ ಪ್ರಭಾವದಡಿ ಯಲ್ಲಿ ಸಿಲುಕಿ ಒಂದು ರೀತಿಯ ಅಸ್ಪೃಶ್ಯತಾ ಭಾವದಿಂದ ನಲುಗುತ್ತಿರಲು ಕಾರಣವೇನು ? ಸಭೆ, ಸಮಾರಂಭಗಳಲ್ಲಿ ಕನ್ನಡ ನಾಡು-ನುಡಿಗೆ ಸಂಬAಧಿಸಿದ ವಿಚಾರ ಸಂಕಿರಣಗಳು, ಉಪನ್ಯಾಸಗಳು, ಕಾರ್ಯಕ್ರಮಗಳು ಯಾರಿಗೆ, ಯಾವ ಉದ್ದೇಶಕ್ಕೆ ಆಯೋಜನೆಗೊಳ್ಳುತ್ತಿವೆ ? ರಾಜಕೀಯ ವಿಚಾರ, ಪಕ್ಷ, ಸಂಘಟನೆ ಮತ್ತು ಧಾರ್ಮಿಕ ಸಂಗತಿಗಳಿಗೆ ಸಂಬAಧಿಸಿದಾಗ ಸ್ಪರ್ಧೆಗೆ ಬಿದ್ದವರಂತೆ ಮುಗಿಬೀಳುವ ಜನ ಭಾಷೆ, ನಾಡು, ನುಡಿಗೆ ಸಂಬAಧಿಸಿದ ವಿಚಾರಗಳಲ್ಲಿ ತಮಗೆ ಸಂಬAಧ ಪಟ್ಟದ್ದಲ್ಲ ಎಂಬAತಹ ನಡವಳಿಕೆ ತೋರುವುದು ಏಕೆ ? ಇದನ್ನೆಲ್ಲ ಅವಲೋಕನ ಮಾಡಿದಾಗ ಪ್ರಾಮಾಣಿಕವಾಗಿರದ ನಾಡು-ನುಡಿಯ ಬಗೆಗಿನ ಅಭಿಮಾನ ಆಚರಣೆ ಯಲ್ಲಿ, ಆಡಂಬರದಲ್ಲಿ ಪ್ರಜ್ವಲಿಸುವ ಆವಶ್ಯಕತೆ ಇದೆಯೇ ಅನಿಸುತ್ತದೆ.

ನವೆಂಬರ್ ತಿಂಗಳು ಬಂತೆAದರೆ ಸಾಕು, ಒಂದಷ್ಟು ಮನೋರಂಜನೆಯ ಕಾರ್ಯಕ್ರಮಗಳು ಸರಕಾರದಿಂದ, ವಿವಿಧ ಸಂಘಟನೆಗಳಿAದ, ಶಾಲಾ ಕಾಲೇಜುಗಳಿಂದ ನಡೆಯುತ್ತದೆ. ಕನ್ನಡ ನಾಡಿನ ಚರಿತ್ರೆಯಲ್ಲಿ ಹೆಸರಾದ ಕೆಲವು ಘಟನೆಗಳು ಹಾಗೂ ಕಾರಣರಾದ ಮಹನೀಯರ ಸ್ಮರಣೆ ಮಾಡುತ್ತೇವೆ. ದಿನಗಳೆದಂತೆ ನಮ್ಮ ಕನ್ನಡಾಭಿಮಾನ ತೆರೆಯ ಮರೆಗೆ ಸರಿಯಲಾರಂಭಿಸುತ್ತದೆ. ಮನಸ್ಸಿಗೆ ಖೇದವೆನಿಸುವುದು ಇಲ್ಲಿ ಯಾಕೀ ನಾಟಕೀಯ ಅಭಿಮಾನ ನಮಗೆ ?

‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್’ ಎಂದು ಒಂಬತ್ತನೇ ಶತಮಾನದಲ್ಲಿಯೇ ಸಾಹಿತ್ಯ ರಚನಾ ಸಾಮರ್ಥ್ಯವನ್ನು ಸಮರ್ಥಿಸಿಕೊಂಡ ಕನ್ನಡದ ಮಣ್ಣಿನ ಮಕ್ಕಳಿಗೆ ಹೆಮ್ಮೆಯಿಂದ ಎದೆಯುಬ್ಬಿಸಿ ಕನ್ನಡ ನುಡಿಗಳನ್ನಾಡಲು ಆಲೋಚಿಸುವಂತಾಗಿದ್ದು ಬಹು ದೊಡ್ಡ ದುರಂತ. ನಮ್ಮದೇ ನಾಡಿನಲ್ಲಿ ಸರಕಾರ ಕಾನೂನಿನ ಮೂಲಕ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಮಾಡಬೇಕಾಗಿರುವುದು ಕನ್ನಡದ ಸ್ಥಿತಿಗತಿ, ಪರಿಸ್ಥಿತಿಯ ಬಗೆಗೆ ಚಿಂತಿಸುವAತೆ ಮಾಡುತ್ತಿದೆ. ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿ ಭಾಷೆ ಎಂದು ಮಹಲಿಂಗರAಗ ಹಾಡಿ ಹೊಗಳಿದ ಕನ್ನಡ ಇಂದು ಆಂಗ್ಲ ಮಾಧ್ಯಮದ ಕಲಿಕಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗುತ್ತಿರುವುದು ಆಸಕ್ತಿಯ ಕೊರತೆಯೋ ಅಥವಾ ಅಭಿಮಾನದ ನಾಶವೋ? ಅರಿಯದಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿ ಇರಬೇಕಾಗಿದ್ದ ಕನ್ನಡವು ಪರಭಾಷೆ ಎಂಬAತೆ ಪರಿಗಣಿಸಲ್ಪಟ್ಟಿದೆ. ಕನ್ನಡ ಪದಗಳ ಅರಿವೇ ಇರದ ಅದೆಷ್ಟೋ ಕನ್ನಡಿಗರು ಪರಭಾಷೆಯ ಮೊರೆ ಹೋಗುತ್ತಾರೆ. ಅಗತ್ಯ ಮೀರಿದ ಆಂಗ್ಲ ಭಾಷೆಯ ಮಿಶ್ರಣವೇ ಇಂದಿನ ಕನ್ನಡದ ಶೈಲಿ. ಇನ್ನು ಟಿವಿ ಚಾನೆಲ್, ರಿಯಾಲಿಟಿ ಶೋಗಳಲ್ಲಿ ಕನ್ನಡದ ಕಗ್ಗೊಲೆಯೇ ನಡೆಯುತ್ತಿದೆ. ಆಂಗ್ಲ ಶೈಲಿಯಲ್ಲಿ ಕನ್ನಡ ನಲಿದಾಡುತ್ತಿದೆ! ಆಕಾಶವಾಣಿ, ದೂರ ದರ್ಶನಗಳು ಮಾತ್ರ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡಿವೆ. ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ನಡೆಸುವ ಯಾವುದೇ ಕಾರ್ಯಕ್ರಮಗಳೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುತ್ತಿಲ್ಲ. ನಿಗದಿಯಾದ, ನಡೆಸಲೇ ಬೇಕಾದ ಕಾರ್ಯಕ್ರಮಗಳೆಲ್ಲವೂ ಜನರ ನಿರಾಶಾದಾಯಕ ಪ್ರತಿಕ್ರಿಯೆಗಳಿಂದಾಗಿ ತನ್ನ ಹುರುಪನ್ನು ಕಳೆದುಕೊಳ್ಳುತ್ತಿದೆ ಎಂದಾದರೆ ಕನ್ನಡ ಪರ ಮನಸ್ಸುಗಳ ಕರ್ತ್ಯವ್ಯವೇನು?

ಯುವ ಸಮೂಹ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ಮೋಹ ಪಾಶಕ್ಕೆ ಸಿಲುಕಿ ಭಾಷೆ, ಸಂಸ್ಕೃತಿಯ ಸೊಗಡನ್ನು ಮರೆಯುತ್ತಿವೆ. ಇಲ್ಲಿ ಯಾವುದು ಯುವ ಸಮುದಾಯದ ಆಕರ್ಷಣೆಯ ಗೂಡಾಗಿದೆಯೋ ಅದರ ಮೂಲಕವೇ ಭಾಷಾ ಅಭಿಮಾನ ಹುಟ್ಟಿಸುವ, ಜಾಗೃತಿ ಮೂಡಿಸುವ ಸೃಜನಾತ್ಮಕ ಕಾರ್ಯಗಳು ನಡೆಯಬೇಕು. ಕನ್ನಡ ನಾಡು, ನುಡಿಯ, ಸಂಸ್ಕೃತಿಯ ಮೌಲ್ಯ ಗಳನ್ನು ತಿಳಿಸುವ ಸ್ಪರ್ಧೆ, ಕಾರ್ಯಾ ಗಾರ, ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುತ್ತಿರಬೇಕು. ಮಕ್ಕಳಲ್ಲಿ ಭಾಷಾ ಪ್ರೇಮ ಬರುವಂತಾ ಗಲು ಮುಖ್ಯವಾಗಿ ಕುಟುಂಬಸ್ಥರು, ಶಾಲೆ, ಸಮುದಾಯ ಪ್ರಮುಖ ಪಾತ್ರವನ್ನು ವಹಿಸಬೇಕು. ಶುದ್ಧ, ಸ್ಪಷ್ಟ, ಭಾಷಾ ಪ್ರಯೋಗಕ್ಕೆ ಆದ್ಯತೆ ನೀಡುವ ಕಾರ್ಯಕ್ರಮಗಳು ಬಾಲ್ಯದಿಂದಲೇ ಸಿಗಬೇಕು. ಪ್ರಾರಂಭಿಕ ಹಂತದಲ್ಲಿ ನಡೆಯುವ ಅಭ್ಯಾಸ, ಹವ್ಯಾಸಗಳು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸುತ್ತವೆ. ಯಾವ ಮಗು ಸಾಹಿತ್ಯ, ನಾಡು ನುಡಿಯ ಬಗೆಗೆ ಆಸಕ್ತಿ ಉಳ್ಳವನಾಗಿ ಬೆಳೆಯುತ್ತಾನೋ ಅವನು ಖಂಡಿತ ವಾಗಿಯೂ ನಾಡಿನ ಸುಪ್ರಜೆಯಾಗುವುದರಲ್ಲಿ ಸಂಶಯ ಇರಲಾರದು. ಹಾಗೆಯೇ ಮಾತೃ ಭಾಷಾ ಪ್ರೇಮ ಎಂಬುದು ಸಹಜವಾಗಿ ತನ್ನ ಕುಟುಂಬ, ಸ್ನೇಹಿತರು, ಬಂಧು ಗಳೊಡನೆ ಅತ್ಯುತ್ತಮ ಬಾಂಧವ್ಯದ ಬೆಸುಗೆಗೆ ಕಾರಣವಾಗುತ್ತದೆ. ಇದೇ ತಾನೇ ಐಕ್ಯತೆಗೆ ಮೂಲ ತಳಪಾಯವನ್ನು ಒದಗಿಸುವ ಸಾಧನ ? ಯಾವುದೋ ದೂರದ ಸ್ಥಳಗಳಲ್ಲಿ, ಅಪರಿಚಿತರ ನಡುವಿನಲ್ಲಿ ಬದುಕುವ ಭಾವ ಜೀವಿಗಳಿಗೆ ತಮ್ಮ ಮಾತೃ ಭಾಷಿಗರ ಸಂಪರ್ಕ ಅದೆಷ್ಟು ಉತ್ಸಾಹ, ಹುಮ್ಮಸ್ಸನ್ನು ನೀಡಬಲ್ಲೆದೆಂದು ಅವರಿಂದಲೇ ಕೇಳಿ ತಿಳಿದುಕೊಳ್ಳಬೇಕು. ಒಂಟಿತನವನ್ನು, ದೂರ ಗೊಳಿಸುವ, ಮಾನಸಿಕ ಒತ್ತಡವನ್ನು ಶಮನ ಗೊಳಿಸುವ ಶಕ್ತಿ ಮಾತೃ ಭಾಷೆಗಿದೆ. ಅನ್ಯಭಾಷಿಗ ರೊಡನೆ ಸ್ಪರ್ಧೆಗಾಗಿ ಭಾಷಾಪ್ರೇಮ ಬೆಳೆಸಿಕೊಳ್ಳದೆ ನಾವು ನಮ್ಮ ಭಾಷೆಯನ್ನು ಸಹಜವಾಗಿ ಪ್ರೀತಿಸಿಕೊಳ್ಳುವ, ಕಾಪಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ಕನ್ನಡಿಗರ ಸಾಮರ್ಥ್ಯ, ಕನ್ನಡಿಗರ ಪ್ರಭಾವ, ಕನ್ನಡಿಗರ ಮೌಲ್ಯಧಾರಿತ ಬದುಕನ್ನು ಜಗತ್ತಿನ ಮುಂದೆ ಅಭಿವ್ಯಕ್ತಿಸಲು ಸಾಧ್ಯವಾಗುವಂತದ್ದು ಭಾಷೆ ಜೀವಂತವಾಗಿದ್ದಾಗ ಮಾತ್ರ. ಭಾಷೆಯನ್ನು ಅಲಕ್ಷö್ಯ ಮಾಡಿ ಏನೇ ಸಾಧಿಸಿದರೂ ನಮ್ಮವರ ಸಾಧನೆಗೆ ಮನ್ನಣೆ ಸಿಗಲಾರದು. ಹೊರಗಿನ ಪ್ರಪಂಚಕ್ಕೆ ಮೊದಲು ನಾವು ಯಾರು, ಏನು ಎಂಬ ಗುರುತಿಸುವಿಕೆಗೆ ಮೂಲ ಅಸ್ತçವೇ ಭಾಷೆಯ ಪರಿಚಯ. ಭಾಷೆಯ ಮೇಲಿನ ಮಮಕಾರ ಮನುಷ್ಯರನ್ನು ಪ್ರೀತಿಸುವಂತೆ ಮಾಡಬಹುದು. ನಮ್ಮವರೆಂಬ ಐಕ್ಯತೆಯನ್ನು ಮೂಡಿಸಲೂಬಹುದು.

-ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,

ಸೈಂಟ್ ಆನ್ಸ್ ಪದವಿ ಕಾಲೇಜು

ವೀರಾಜಪೇಟೆ. ನಮ್ಮ ಹೆಮ್ಮೆಯ ಕನ್ನಡ ನಾಡು ಭಾಷಣ ಘೋಷಣೆ ಯಿಂದ ಉಳಿಯದು, ಬೆಳೆಯದು. ಭಾಷೆಯ ಮೇಲಿರ ಬೇಕು ಆಸಕ್ತಿ ಅಭಿಮಾನ. ಯಾವುದೇ ಭಾಷೆಯಾದರೂ ನಾವು ಅದನ್ನು ಬಳಸಿದರೆ ಮಾತ್ರ ಅದು ಬೆಳೆಯುವುದು, ಕನ್ನಡ ರಾಜ್ಯೋತ್ಸವದಂದು ಕನ್ನಡ ಭಾಷೆ ನೆನಪಿದ್ದರೆ ಸಾಲದು, ಅದರಿಂದ ನಮ್ಮ ಭಾಷೆ ಬೆಳೆಯದು, ನಮ್ಮ ನಡೆ, ನುಡಿ, ಆಚಾರ-ವಿಚಾರ ಎಲ್ಲವೂ ಕನ್ನಡಮಯ ವಾಗಿ ನಾವು ಕಲಿತು ಇತರರಿಗೂ ಕಲಿಸಬೇಕು. ನಾವೇ ನಮ್ಮ ಭಾಷೆಯನ್ನು ಕಡೆಗಣಿಸುವಂತಾಗಬಾರದು. ಕನ್ನಡ ನಮ್ಮ ಉಸಿರಾಗಿರಬೇಕು. ತನು, ಮನ, ನುಡಿ ಕನ್ನಡಮಯವಾಗಿರಬೇಕು.

ನಮ್ಮ ಭಾಷೆ, ಜಲ-ನೆಲ ಎಲ್ಲವೂ ಕನ್ನಡ. ನಾವೆಷ್ಟೇ ಕಲಿತರೂ ನಮ್ಮ ಮಾತೃಭಾಷೆ ಬೇಕು. ನಾವು ಯಾವ ದೇಶದಲ್ಲಿ ದ್ದರೂ ನಮ್ಮ ಭಾಷೆ ನಮ್ಮನ್ನು ಒಂದುಗೂಡಿಸುವುದು. ಮನೆಯಲ್ಲಿ ಮಕ್ಕಳೊಡನೆ ನಮ್ಮ ಭಾಷೆಯಲ್ಲೇ ಮಾತಾಡಬೇಕು. ಮಕ್ಕಳಿಗೆ ಚಿಕ್ಕಂದಿನಿAದಲೇ ಭಾಷೆ ಕಲಿಸಿ, ಪತ್ರಿಕೆ, ಸಂಚಿಕೆ ಓದಲು ಕಲಿಸಿ ಪ್ರಾಥಮಿಕ ಹಂತದಲ್ಲೇ ಅವರನ್ನು ಮಾತೃಭಾಷೆಗೆ ಹೆಚ್ಚು ಒತ್ತು ಕೊಡುವಂತೆ ಮಾಡಬೇಕು.

ಮನೆಯೇ ಮೊದಲ ಪಾಠಶಾಲೆ, ಮಕ್ಕಳನ್ನು ತಿದ್ದಿತೀಡುವ ಹೆತ್ತವರು ಮಾತೃಭಾಷೆಯ ಅರಿವು ಅವರಿಗಾಗುವಂತೆ ಮಾಡಬೇಕು. ಕನ್ನಡ ನಮ್ಮ ಕರುಳನಾಡು, ನಾವು ಕನ್ನಡಮ್ಮನ ಮಕ್ಕಳು, ಕನ್ನಡ ನಮ್ಮ ಕರುಳಭಾಷೆ, ಕನ್ನಡ ಕಸ್ತೂರಿ ಇದ್ದಂತೆ ವೀರಶೂರರ ಗಂಡುಗಲಿಗಳ ನಾಡು. ಹೆಸರಾಂತ ಕವಿಗಳು, ಕಾವ್ಯಧಾರೆ ಹರಿಸಿದ ನಾಡು ಕನ್ನಡ ಸಾಹಿತ್ಯ ಸಂಸ್ಕೃತಿಯ ಹೆಮ್ಮೆಯ ನಾಡು ನಮ್ಮದು.

ನಮ್ಮಲ್ಲಿ ಭಾಷಾಭಿಮಾನವಿರಬೇಕು. ಆದರೆ, ಮಾತ್ರ ನಾವು ಕನ್ನಡಿಗರೆನಿಸಿಕೊಳ್ಳುವೆವು. ಜಾನಪದ ಸಾಹಿತ್ಯ ಉಳಿದಿರುವುದು ನಮ್ಮ ಭಾಷೆಯಿಂದ, ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋದ ಆಸ್ತಿಯಿದು, ಅದನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗೋಣ.

ಕನ್ನಡ ನಾಡು ಕಲೆಗಳ, ಶಿಲೆಗಳ ಬೀಡು. ಕೆಚ್ಚೆದೆಯ ಹೋರಾಟಗಾರರ ನಾಡು. ಸರ್ವಜ್ಞ ವ್ಯಾಸ ರನ್ನ ಪಂಪ ಹೊನ್ನ, ರನ್ನ ಕವಿಗಳು ಕನ್ನಡ ನಾಡಿನ ಹಿರಿಮೆಯನ್ನು ಸಾರಿದರು.ಕನ್ನಡ ಮುನ್ನಡೆಯ ದಾರಿದೀಪ ಕನ್ನಡದ ಕುಲದೇವಿ ಅವಳೇ ಕನ್ನಡದ ನಮ್ಮಮ್ಮ. ಅವಳಿಗೆ ಹಣತೆಯ ಹಚ್ಚಿ ಕೈ ಮುಗಿಯೋಣ. ಜಗತ್ತಿನಲ್ಲಿಯೇ ಶ್ರೀಮಂತ ಭಾಷೆ ನಮ್ಮ ಕನ್ನಡ ನವೆಂಬರ್ ಒಂದರAದು ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸುವೆವು. ಹರಿದು ಹಂಚಿ ಹೋಗಿದ್ದ ಕನ್ನಡನಾಡು ಕರ್ನಾಟಕ ಎಂದು ನಾಮಕರಣಗೊಂಡ ದಿನವಿದು. ಕನ್ನಡಿಗರಾದ ನಾವುಗಳು ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕಾದುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ. ನಮ್ಮ ಭಾಷೆ ಉಳಿಯಲು ನಾವೆಲ್ಲರೂ ಒಂದಾದರೆ ಮಾತ್ರ ರಾಜ್ಯೋತ್ಸವ ಎನ್ನುವದಕ್ಕೆ ಒಂದರ್ಥ ಸಿಗುವುದು. ನಮ್ಮ ಕನ್ನಡ ನುಡಿ, ಹೊನ್ನಿನ ನುಡಿ ಕನ್ನಡದ ಪರಿಮಳ ಎಲ್ಲೆಲ್ಲೂ ಹರಡುವಂತಾಗಬೇಕು.

ಆಲೂರು ವೆಂಕಟರಾವ್ ಕರ್ನಾಟಕ ಏಕೀಕರಣ ಚಳುವಳಿ ಪ್ರಾರಂಭಿಸಿ ೧೯೫೦ರಲ್ಲಿ ಭಾರತ ಗಣರಾಜ್ಯವಾದ ನಂತರ ೧೯೫೬ರ ನವೆಂಬರ್ ಒಂದರAದು ಏಕೀಕೃತ ಕನ್ನಡನಾಡು ಮೈಸೂರು ಎಂದು ನಾಮಕರಣ ಗೊಂಡು ಚಳುವಳಿಯ ಹೋರಾಟಗಾರರ, ಸಾಹಿತಿಗಳ ಸಂಘಟನೆಗಳ ಹೋರಾಟದಿಂದ ೧೯೭೩ ನವೆಂಬರ್ ಒಂದರAದು ಕನ್ನಡರಾಜ್ಯವಾಯಿತು.

ಇಂತಹ ಭವ್ಯ ನಾಡನ್ನು ಮರೆಯಬಾರದು. ಎಲ್ಲಾದರೂ ಇರು, ಎಂತಾದರೂ ಇರು ಎಂದೆAದೂ ಕನ್ನಡವಾಗಿರು, ಕನ್ನಡನಾಡನ್ನು ಹಾಡಿ ಹೊಗಳಿರುವರು ಕವಿವರ್ಮರು. ಹರಿದು ಹಂಚಿಹೋಗಿರುವ ಹಲವು ಜಿಲ್ಲೆಗಳಲ್ಲಿ ಉಳಿದಿರುವ ಜಿಲ್ಲೆಯನ್ನು ಕಳೆದುಕೊಳ್ಳದೆ ನಾವು ಜಾಗೃತರಾಗಬೇಕಾಗಿದೆ. ಕನ್ನಡಿಗರ ಉಸಿರಾದ ಕನ್ನಡನಾಡನ್ನು ಹಸಿರಾಗಿರುವಂತೆ ಮಾಡೋಣ. ಕನ್ನಡ ಉಳಿದರೆ, ಕನ್ನಡಿಗರಾದ ನಾವು ಉಳಿದಂತೆ, ಜೇನಿನ ಹೊಳೆಯೋ, ಹಾಲಿನ ಮಳೆಯೋ ಕನ್ನಡ ಸವಿ ನುಡಿಯೋ ಎಂದು ಕವಿಗಳು ಕಾವ್ಯವನ್ನು ಹೊರ ಚೆಲ್ಲಿರುವರು. ಕನ್ನಡ ಹಣತೆಗೆ ಭಾಷಾಭಿಮಾನದ ಎಣ್ಣೆ ಭಕ್ತಿಯಿಂದ ಹೊತ್ತಿಸಿ ಬೆಳಕು ನೀಡು ವಂತೆ ಮಾಡಿದರೆ ನಮ್ಮ ಕನ್ನಡ ರಾಜ್ಯೋತ್ಸವ ಆಚರಣೆ ಅರ್ಥಪೂರ್ಣ ವೆಂದೆನಿಸುವುದು. ಕನ್ನಡದ ದಾರಿದೀಪ ಕನ್ನಡಮ್ಮ, ಅವಳಿಗೆ ಕೈ ಮುಗಿಯೋಣ.

-ಚೊಟ್ಟೆಯಂಡಮಾಡ ಲಲಿತಕಾರ್ಯಪ್ಪ,

ಟಿ.ಶೆಟ್ಟಿಗೇರಿ.