ಮಡಿಕೇರಿ, ಅ. ೨೯: ಬೊಳ್ಳುಮಾಡು ಗ್ರಾಮದಲ್ಲಿ ಬೆಳಕಿಗೆ ಬಂದಿರುವ ಕಾಡು ಪಾಲಾಗಿದ್ದ ಪುರಾತನ ಕಾಲದ ಶ್ರೀ ಮಾದೇರಪ್ಪ ದೇವಸ್ಥಾನಕ್ಕೆ ಮರು ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಇದೀಗ ಸ್ಥಳೀಯ ಗ್ರಾಮಸ್ಥರು ಮುಂದಾಗಿದ್ದಾರೆ. ಸುಮಾರು ೮೦೦ ವರ್ಷಗಳಷ್ಟು ಪುರಾತನ ಕಾಲದ್ದು ಎನ್ನಲಾಗಿರುವ ಈ ದೇಗುಲ ಕಾಡು ಪಾಲಾಗಿರುವುದು ಇತ್ತೀಚಿನ ಕೆಲ ವರ್ಷಗಳ ಹಿಂದೆ ಅರಿವಾಗಿತ್ತು. ಈ ಬಗ್ಗೆ ಸ್ಥಳೀಯರು ಶೋಧ ನಡೆಸಿದ ಸಂದರ್ಭ ದೇಗುಲಕ್ಕೆ ಸಂಬAಧಿಸಿದ ಹಲವು ವಸ್ತುಗಳು ದೇಗುಲದ ಕುರುಹುಗಳು ಪತ್ತೆಯಾಗಿದ್ದವು. ಈ ಹಿಂದೊಮ್ಮೆ ಪೂಪ್ರಶ್ನೆ, ತಾಂಬೂಲ ಪ್ರಶ್ನೆ, ಅಷ್ಟಮಂಗಲ ಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ದೇಗುಲದ ಜೀರ್ಣೋದ್ಧಾರದ ಪ್ರಸ್ತಾಪ ಆಗಲೂ ಬಂದಿದ್ದರೂ ರಸ್ತೆ ಸಮಸ್ಯೆ ಮತ್ತಿತರ ಕಾರಣಗಳಿಂದ ಇದು ಮತ್ತೆ ವಿಳಂಬವಾಗಿತ್ತು. ಇದೀಗ ಗ್ರಾಮಸ್ಥರು ಮತ್ತೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೀಗ ಭಗ್ನಗೊಂಡಿರುವ ತಾಮ್ರದ ಹೊದಿಕೆಯ ದೇವಾಲಯ ಶಿವಲಿಂಗ, ಪೀಠ, ಕಡತಲೆ, ಗಣಪತಿ ವಿಗ್ರಹ, ಗಂಟೆ ಸಾಲಿಗ್ರಾಮದಂತಹ ವಸ್ತುಗಳು ಪತ್ತೆಯಾಗಿವೆ. ಇವುಗಳೆಲ್ಲವನ್ನು ಕ್ರೋಢೀಕರಿಸಲಾಗಿದೆ. ಇತ್ತೀಚೆಗೆ ಸ್ಥಳಕ್ಕೆ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ನಾಯಕಂಡ ಪ್ರಕಾಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಗುರುವಾರದಂದು ಗ್ರಾಮಸ್ಥರು ಮತ್ತೆ ಸೇರಿ ದೈವಿಕ ಕಾರ್ಯದ ಮೂಲಕ ಜೀರ್ಣೋದ್ಧಾರದ ತೀರ್ಮಾನ ಕೈಗೊಂಡಿದ್ದಾರೆ. ದಾನಿಗಳೂ ಸಹಕಾರ ನೀಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯರನ್ನು ಒಳಗೊಂಡ ಟ್ರಸ್ಟ್ ಒಂದನ್ನು ರಚಿಸಿ ಆ ಮೂಲಕ ಜೀರ್ಣೋದ್ಧಾರ ಕೆಲಸ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯರಾದ ಮಾತಂಡ ನಟೇಶ್ ಅವರು ಮಾಹಿತಿ ನೀಡಿದ್ದಾರೆ. ದೈವಿಕ ಪ್ರಶ್ನೆಯ ಸಂದರ್ಭದಲ್ಲಿ ಶೀಘ್ರದಲ್ಲಿ ಈ ಕೆಲಸ ಪ್ರಾರಂಭಗೊAಡು ದೇಗುಲ ಜೀರ್ಣೋದ್ಧಾರದೊಂದಿಗೆ ಅಭಿವೃದ್ಧಿಗೊಂಡು ಹೊಸ ಐತಿಹ್ಯ ಸೃಷ್ಟಿಯಾಗಲಿದೆ ಎಂದು ತಿಳಿದು ಬಂದಿರುವುದಾಗಿ ಅವರು ತಿಳಿಸಿದ್ದಾರೆ.