ಶನಿವಾರಸಂತೆ, ಅ. ೩೦: ಆ ಜ್ಞಾನ ದೇಗುಲದಲ್ಲಿ ಜ್ಞಾನದ ಬೆಳಕು ಪ್ರಜ್ವಲಿಸುತ್ತಿತ್ತು. ಬಣ್ಣ ಬಣ್ಣದ ಬಟ್ಟೆ ತೊಟ್ಟ ಚಿಣ್ಣರು ಬಣ್ಣ ಬಣ್ಣದ ರಂಗೋಲಿಯ ಮೇಲೆ ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದರು. ಅಲ್ಲದೆ ನಾನು ಈ ಬಾರಿ ಪಟಾಕಿ ಹೊಡೆಯುವುದಿಲ್ಲ ಎಂಬ ಪ್ರತಿಜ್ಞಾವಿಧಿ ಸ್ವೀಕರಿಸಿ ಹಸಿರು ದೀಪಾವಳಿ ಆಚರಿಸಿದರು.
ಮುಳ್ಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಸತೀಶ್ ಅವರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಹಸಿರು ಜ್ಞಾನ ದೀಪಾವಳಿಯನ್ನು ಸಮಾಜಕ್ಕೊಂದು ಸಂದೇಶವನ್ನು ಸಾರುವಂತೆ ಬಹಳ ಅರ್ಥಪೂರ್ಣವಾಗಿ ಆಚರಿಸಿದರು. ಕೆಲವು ವಿದ್ಯಾರ್ಥಿಗಳು ಈ ಬಾರಿ ನಾವು ಪಟಾಕಿಗೆ ಖರ್ಚು ಮಾಡುವ ಹಣವನ್ನು ಶಾಲಾ ಬ್ಯಾಂಕಿನಲ್ಲಿ ಹಾಕಿ ಉಳಿತಾಯ ಮಾಡುತ್ತೇವೆ, ಮತ್ತೆ ಕೆಲವರು ಅದೇ ಹಣದಿಂದ ಪುಸ್ತಕವನ್ನು ಖರೀದಿಸುತ್ತೇವೆಂದು. ಮತ್ತೆ ಕೆಲವರು ಅದೇ ಹಣದಿಂದ ಬಟ್ಟೆಯನ್ನು ಖರೀದಿಸುತ್ತೇವೆಂದು, ಬಡವರಿಗೆ, ಅಶಕ್ತರಿಗೆ, ವೃದ್ಧರಿಗೆ, ಅನಾಥಾಶ್ರಮಕ್ಕೆ ನೀಡುತ್ತೇವೆಂದು ಪ್ರತಿಜ್ಞೆ ಮಾಡಿದರು. ಅತಿಥಿ ಶಿಕ್ಷಕಿ ನವ್ಯ ಎಂ.ಆರ್. ಮಾತನಾಡಿ, ಪಟಾಕಿಯಿಂದಾಗಿ ಅತಿ ಹೆಚ್ಚು. ಅಪಘಾತಕ್ಕೆ ಒಳಗಾಗುತ್ತಿರುವವರು ದೊಡ್ಡವರಿಗಿಂತ ಮಕ್ಕಳೇ ಹೆಚ್ಚು ಪಟಾಕಿಯ ಸದ್ದಿಗೆ ಮತ್ತು ಅದರ ಹೊಗೆಗೆ ಮನೆಯಲ್ಲಿರುವ ಸಾಕುಪ್ರಾಣಿಗಳು, ಪಕ್ಷಿಗಳು, ಪತಂಗಗಳು ಹೆದರುತ್ತವೆ. ಅಸ್ವಸ್ಥರು, ವೃದ್ಧರು, ಹೃದ್ರೋಗಿಗಳು, ಬಾಣಂತಿಯರು ಯಾತನೆ ಪಡುತ್ತಾರೆ. ದೀಪಾವಳಿ ಬೆಳಕಿನ ಹಬ್ಬ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿ ಆನಂದ ಪಡಬೇಕೇ ಹೊರತು ಪಟಾಕಿಗಳನ್ನು ಸಿಡಿಸಿ ಅಲ್ಲ ಎಂದರು
ಮುಖ್ಯ ಶಿಕ್ಷಕ ಸತೀಶ್ ಮಾತನಾಡಿ, ಇದು ತ್ಯಾಗ ಬಲಿದಾನಗಳ ನೆನಪಿಸಿಸಿಕೊಳ್ಳುವ ಪುರಾಣ ಇತಿಹಾಸಗಳ ಕಥೆಯನ್ನು ಮೆಲಕು ಹಾಕುವ ಹಬ್ಬವಾಗಬೇಕು. ಭಯಾನಕ ಶಬ್ದಗಳನ್ನು ಉತ್ಪಾದಿಸಿ ವಿಕೃತವಾಗಿ ಆಚರಿಸುವ ಹಬ್ಬವಲ್ಲ. ಹಾಗೊಮ್ಮೆ ಶಬ್ದವೇ ಮುಖ್ಯವಾದರೆ ಪ್ರತಿಯೊಬ್ಬರೂ ಮನೆ ಮನೆಯಲ್ಲಿ ಪಟಾಕಿಗಳನ್ನ ಸಿಡಿಸುವ ಬದಲು ಸಮುದಾಯದವರು ಒಂದೆಡೆ ಸೇರಿ ಬಯಲುಗಳಲ್ಲಿ ಆಚರಿಸಿದರೇ ಮಾಲಿನ್ಯದ ಪ್ರಮಾಣವನ್ನು ಕೊಂಚವಾದರೂ ಕಡಿಮೆ ಮಾಡಬಹುದು ಎಂದು ತಿಳಿಸಿದರು.