ಮಡಿಕೇರಿ, ಅ. ೨೯: ಗೋಡೆಯ ಮೇಲೆ ಕಾಮನ ಬಿಲ್ಲಿನ ಚಿತ್ತಾರ, ಹಬ್ಬಿ ನಿಂತಿರುವ ಹಸಿರಿನ ಬಳ್ಳಿಗಳಲ್ಲಿ ಬಣ್ಣ ಬಣ್ಣದ ಹೂವುಗಳು, ಬೆಟ್ಟ-ಗುಡ್ಡ, ಗರಿ ಬಿಚ್ಚಿ ಹಾರುವ ಪಕ್ಷಿಗಳ ಕೆಳಗೆ ದಿಟ್ಟಿಸಿ ನೋಡುತ್ತಿರುವ ಸಿಂಹ, ಜಿಂಕೆ, ಆನೆ, ಜಿರಾಫೆ... ಪುಟ್ಟ ಕಂದಮ್ಮಗಳನ್ನು ಅಕ್ಷರ ಮೋಡಿಯೊಳಗೆ ಬೀಳಿಸಲು ಇನ್ನೇನು ಬೇಕು ?
ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದಲ್ಲಿರುವ ವಿನಾಯಕ ಬಡಾವಣೆಯ ಅಂಗನವಾಡಿಗೆ ಈಗ ಹೊಸ ರೂಪ ಸಿಕ್ಕಿದೆ. ಟಿಪಿಕಲ್ ಸರಕಾರಿ ಕಚೇರಿಯಂತೆ ಕಾಣುತ್ತಿದ್ದ ಹಳೆಯ ಅಂಗನವಾಡಿ ಜಾಗದಲ್ಲಿ ಈಗ ಕಾಮನಬಿಲ್ಲಿನೊಳಗೆ ಅದ್ದಿ ತೆಗೆದಂತೆ ಬಣ್ಣ ಬಣ್ಣದಲ್ಲಿ ಮಿಂಚುತ್ತಿರುವ ಹೊಸ ಅಂಗನವಾಡಿ ಕಟ್ಟಡ ಗಮನ ಸೆಳೆಯುತ್ತಿದೆ.
೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ೩.೫ ಲಕ್ಷ ರೂ. ವ್ಯಯಿಸಿ ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಹಳೆಯ ಅಂಗನವಾಡಿಗೆ ಹೊಸ ರೂಪ ಕೊಡಲಾಗಿದೆ. ಅಂಗನವಾಡಿಯ ಹೊರಗೋಡೆ ಮಾತ್ರವಲ್ಲದೆ ಒಳಗೋಡೆಗಳನ್ನೂ ಚಿತ್ತಾಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಅಂಗನವಾಡಿಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿಯುವ ಮಗು ಕೂಡ ಖುಷಿಯಿಂದ ಆಡುತ್ತಾ ಬರುವಂತೆ ಇಲ್ಲಿಯ ವಾತಾವರಣ ರೂಪಿಸಲಾಗಿದೆ.
ಅಂಗನವಾಡಿಯ ಒಳಾಂಗಣದಲ್ಲಿ ಟೈಲ್ಸ್ ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುತ್ತ ಆವರಣ ಗೋಡೆಯನ್ನೂ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಇಂಟರ್ಲಾಕ್ ಅಳವಡಿಸಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ. ಪೌಷ್ಟಿಕ ತೋಟ, ಒಳಾಂಗಣ ಹಾಗೂ ಹೊರಾಂಗಣದ ವರ್ಣರಂಜಿತ ನೋಟಗಳ ಮೂಲಕ ಕಲಿಕಾ ಸ್ನೇಹಿಯಾಗಿ ರೂಪುಗೊಳಿಸಲಾಗಿದೆ. -ಸುನಿಲ್ ಪೊನ್ನೇಟಿ