ಸೋಮವಾರಪೇಟೆ, ಅ. ೨೯: ಸೂಕ್ಷö್ಮ ಪ್ರದೇಶವೆಂದು ಪರಿಗಣಿಸಲ್ಪಟ್ಟಿರುವ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಕಳೆದ ವರ್ಷ ಒಟ್ಟಾರೆ ೧೩೦ ಮೊಕದ್ದಮೆಗಳು ದಾಖಲಾಗಿದ್ದರೆ, ಈ ವರ್ಷ ಅಕ್ಟೋಬರ್ ೨೨ರವೆರೆಗೆ ೧೩೪ ಕೇಸ್‌ಗಳು ದಾಖಲಾಗಿವೆ.

ಕಳೆದ ವರ್ಷಕ್ಕಿಂತ ಹೆಚ್ಚು ಮೊಕದ್ದಮೆಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕಳೆದ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟಾರೆ ೧೩೦ ಕೇಸ್‌ಗಳು ದಾಖಲಾಗಿದ್ದರೆ, ಈ ವರ್ಷ ಜನವರಿಯಿಂದ ಅಕ್ಟೋಬರ್ ೨೨ರವರೆಗೆ ೧೩೪ ಮೊಕದ್ದಮೆಗಳು ದಾಖಲಾಗಿದೆ. ಪ್ರಸ್ತುತ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ರಾಮಚಂದ್ರನಾಯಕ್ ಅವರು ಅಧಿಕಾರ ವಹಿಸಿಕೊಂಡ ನಂತರ ಕಳೆದೆರಡು ತಿಂಗಳಿನಲ್ಲಿ ೪೬ ಪ್ರಕರಣಗಳು ಎಫ್‌ಐಆರ್ ಆಗಿವೆ.

ಕಳೆದ ವರ್ಷ ೫ ಕೊಲೆಯತ್ನ, ೮ ಕಳ್ಳತನ, ೧೮ ಅಪಘಾತ, ೨೮ ಹೊಡೆದಾಟ, ೩ ವರದಕ್ಷಿಣೆ ಕಿರುಕುಳ, ೭ ಫೋಕ್ಸೋ, ೯ ಅಟ್ರಾಸಿಟಿ, ೨೩ ಅಬಕಾರಿ, ೩ ಜೂಜಾಟ, ೨೬ ಇತರೆ ಮೊಕದ್ದಮೆಗಳು ದಾಖಲಾಗಿವೆ.

ಈ ವರ್ಷ ಇಲ್ಲಿಯವರೆಗೆ ೧ ಕೊಲೆ, ೪ ಕೊಲೆಯತ್ನ, ೧೬ ಕಳ್ಳತನ, ೨೧ ಅಪಘಾತ, ೨೮ ಹೊಡೆದಾಟ, ೩ ವರದಕ್ಷಿಣೆ ಕಿರುಕುಳ, ೩ ಫೋಕ್ಸೋ, ೭ ಅಟ್ರಾಸಿಟಿ, ೧೩ ಅಬಕಾರಿ, ೨ ಜೂಜಾಟ, ೩೬ ಇತರೆ ಮೊಕದ್ದಮೆಗಳು ದಾಖಲಾಗಿವೆ.

ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಾಮಚಂದ್ರ ನಾಯಕ್ ಅವರು ಕಳೆದ ೦೫.೦೮.೨೦೨೨ರಂದು ಅಧಿಕಾರ ವಹಿಸಿಕೊಂಡಿದ್ದು, ಇವರು ಅಧಿಕಾರ ವಹಿಸಿಕೊಳ್ಳುವ ಒಂದು ತಿಂಗಳು ಮುಂಚೆ ಠಾಣಾಧಿಕಾರಿಯಾಗಿ ರಮೇಶ್‌ಕುಮಾರ್ ಅವರು ನೇಮಕಗೊಂಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ವಹಿಸಿ ಕೊಂಡ ಈ ಅಲ್ಪ ಅವಧಿಯಲ್ಲಿಯೇ ೪೬ ಮೊಕದ್ದಮೆಗಳನ್ನು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

ಈ ಹಿಂದೆ ಬಹುತೇಕ ದೂರುಗಳು ಮಾತುಕತೆಗಳ ಮೂಲಕ ಅಥವಾ ಇನ್ನಿತರ ದಾರಿಯಲ್ಲಿ ಬಗೆಹರಿಯುತ್ತಿದ್ದವು. ಕೆಲವೊಂದು ಪ್ರಕರಣಗಳು

(ಮೊದಲ ಪುಟದಿಂದ) ಪೊಲೀಸ್ ಠಾಣೆಯ ಹೊರಗೆ ‘ಸೆಟಲ್‌ಮೆಂಟ್’ ಆಗುತ್ತಿದ್ದವು. ಇದೀಗ ಮಾತುಕತೆಯ ಮೂಲಕ ಬಗೆಹರಿಸಲು ಕಷ್ಟಸಾಧ್ಯವಾಗುವಂತಹ ಪ್ರಕರಣಗಳು ಬಂದೊಡನೆ ಪ್ರಥಮ ವರ್ತಮಾನ ವರದಿ ತಯಾರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಸ್ತುತ ಬಹುತೇಕ ಹೊಸ ಸಿಬ್ಬಂದಿಗಳೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊತ್ತಿದ್ದಾರೆ. ಸೋಮವಾರಪೇಟೆ ಪಟ್ಟಣದಲ್ಲಿ ಬಹುಮುಖ್ಯವಾಗಿ ವಾಹನ ಸಂಚಾರ ಹಾಗೂ ನಿಲುಗಡೆ ಸಮಸ್ಯೆ ಇದ್ದು, ಈ ಬಗ್ಗೆಯೂ ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿಯೊAದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕಿದೆ.

ಇದರೊಂದಿಗೆ ವಾಹಗಳನ್ನು ಎಲ್ಲೆಂದರಲ್ಲಿ ನಿಲುಗಡೆಗೊಳಿಸುವುದು, ದ್ವಿಚಕ್ರ ವಾಹನಗಳ ಸೈಲೆನ್ಸರ್ ಮೋಡಿಫೈ ಮಾಡಿ ಕರ್ಕಶ ಶಬ್ದಗಳನ್ನು ಹೊರಹೊಮ್ಮಿಸುವುದು, ಕಾಲೇಜುಗಳು ಪ್ರಾರಂಭವಾಗುವ ಹಾಗೂ ತರಗತಿಗಳು ಬಿಡುವ ಸಂದರ್ಭದಲ್ಲಿ ಕೆಲ ಪೋಕರಿಗಳು ಸುಖಾಸುಮ್ಮನೆ ಬೈಕ್‌ಗಳಲ್ಲಿ ಅಡ್ಡಾಡುವುದು, ಅತೀ ವೇಗವಾಗಿ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಇತ್ಯಾದಿಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ.

ಇನ್ನು ಗ್ರಾಮೀಣ ಭಾಗದ ಬಹುತೇಕ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆಯಿದ್ದರೂ ಸಹ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಅಬಕಾರಿ ಇಲಾಖೆಗೆ ದೂರು ನೀಡಿದರೆ ಅವರು ಬರುವ ಮೊದಲೇ ಅಂಗಡಿ ಮಾಲೀಕರಿಗೆ ಮಾಹಿತಿ ಸೋರಿಕೆಯಾಗಿರುತ್ತದೆ. ಇದರೊಂದಿಗೆ ದೂರುದಾರರ ಮಾಹಿತಿಯನ್ನೂ ಅಕ್ರಮ ಮದ್ಯ ಮಾರಾಟಗಾರರಿಗೆ ನೀಡಲಾಗುತ್ತಿದೆ. ಇದರಿಂದಾಗಿ ಅಬಕಾರಿ ಇಲಾಖೆಯಿಂದ ಅಕ್ರಮಕ್ಕೆ ಕಡಿವಾಣ ಅಸಾಧ್ಯ. ಈ ಹಿನ್ನೆಲೆ ಪೊಲೀಸ್ ಇಲಾಖೆ ಇತ್ತ ಗಮನಹರಿಸುವುದು ಸೂಕ್ತ ಎಂದು ಆಗ್ರಹಪೂರ್ವಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಹಿಂದೆ ಗ್ರಾಮಕ್ಕೊಬ್ಬರಂತೆ ಬೀಟ್ ಪೊಲೀಸ್‌ಗಳಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಅಕ್ರಮಗಳಿಗೆ ತಕ್ಕಮಟ್ಟಿಗೆ ಕಡಿವಾಣ ಬೀಳುತ್ತಿತ್ತು. ಇದೀಗ ಬೀಟ್ ಪೊಲೀಸ್ ವ್ಯವಸ್ಥೆಯಿದ್ದರೂ ಪರಿಣಾಮಕಾರಿಯಾಗಿಲ್ಲ. ಈ ಹಿನ್ನೆಲೆ ವ್ಯವಸ್ಥೆಯನ್ನು ಬಿಗಿಗೊಳಿಸಲು ಅಧಿಕಾರಿ ವರ್ಗ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಸದ್ಯದ ಮಟ್ಟಿಗೆ ಪೊಲೀಸ್ ಠಾಣೆಯಲ್ಲಿ ಅಷ್ಟಾಗಿ ಸಿಬ್ಬಂದಿಗಳ ಕೊರತೆಯಿಲ್ಲ. ಪೊಲೀಸ್ ಇನ್ಸ್ಪೆಕ್ಟರ್‌ರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗಕ್ಕೆ ಪ್ರತ್ಯೇಕವಾಗಿ ಈರ್ವರು ಠಾಣಾಧಿಕಾರಿಗಳಿದ್ದಾರೆ. ಸೋಮವಾರಪೇಟೆ ವ್ಯಾಪ್ತಿಯು ಗುಡ್ಡಗಾಡು ಮತ್ತು ಭೌಗೋಳಿಕವಾಗಿಯೂ ಹೆಚ್ಚು ವಿಸ್ತಾರ ಹೊಂದಿರುವ ಕೇಂದ್ರವಾಗಿದೆ.

ಇದೀಗ ಪೊಲೀಸ್ ಇನ್ಸ್ಪೆಕ್ಟರ್ ಅವರ ಜೀಪ್ ಉತ್ತಮ ಸ್ಥಿತಿಯಲ್ಲಿದ್ದು, ಠಾಣಾಧಿಕಾರಿಗಳ ಜೀಪ್ ಅಷ್ಟೊಂದು ಸುಸ್ಥಿತಿಯಲ್ಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನ ಹರಿಸಿ ಠಾಣಾಧಿಕಾರಿಗಳ ಓಡಾಟಕ್ಕೆ ಮುಂದಿನ ದಿನಗಳಲ್ಲಿ ಸುಸ್ಥಿತಿಯ ಜೀಪ್ ಒದಗಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂಬುದು ಪೊಲೀಸ್‌ಸ್ನೇಹಿ ಜನರ ಅಭಿಪ್ರಾಯವಾಗಿದೆ.

-ವಿಜಯ್ ಹಾನಗಲ್