ಹಳ್ಳಿಗಟ್ಟು ಸಿಐಟಿ ಕಾಲೇಜು

ಪೊನ್ನಂಪೇಟೆ: ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಮತ್ತು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕೋಟಿಕಂಠ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದ ಮೇರೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು, ಹಚ್ಚೇವು ಕನ್ನಡದ ದೀಪ, ಬಾರಿಸು ಕನ್ನಡ ಡಿಂಡಿಮವ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಕಂಪನ್ನು ಪಸರಿಸಿ, ನನ್ನ ನಾಡು - ನನ್ನ ಹಾಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಂದರ್ಭ ಸರ್ವರೂ ಸಂಕಲ್ಪ ವಿಧಿಯನ್ನು ಸ್ವೀಕರಿಸಿದರು.

ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಿ ಐ.ಪಿ.ಯು.ಸಿ.ಯ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ, ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಕಂಚನ್ ಕಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.ಕೂಡುಮಂಗಳೂರು ಪ್ರೌಢಶಾಲೆ

ಕೂಡಿಗೆ: ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ "ನನ್ನ ನಾಡು - ನನ್ನ ಹಾಡು"ಕೋಟಿ ಕಂಠ ಗಾಯನ ಕಾರ್ಯಕ್ರಮದಡಿ ಸಮೂಹ ಗೀತ ಗಾಯನ ಮಾಡಲಾಯಿತು.

ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ ಆರು ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪ್ರತಿಯೊಬ್ಬರೂ ಕನ್ನಡ ನಾಡು- ನುಡಿ, ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದರು. ಕನ್ನಡ ಭಾಷಾ ಶಿಕ್ಷಕ ಕೆ. ಗೋಪಾಲಕೃಷ್ಣ, ಕೋಟಿ ಕಂಠ ಗಾಯನ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಎನ್. ಪುಟ್ಟಸ್ವಾಮಿ, ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಕ ಎಂ.ಟಿ. ದಯಾನಂದ ಪ್ರಕಾಶ್ ಸಂಕಲ್ಪ ವಿಧಿ ಬೋಧಿಸಿದರು. ಎಸ್‌ಡಿಎಂಸಿ ಸಮಿತಿಯ ಉಪಾಧ್ಯಕ್ಷೆ ಉಷಾ, ಸದಸ್ಯ ಜವರಯ್ಯ, ಶಿಕ್ಷಕಿಯರು ಇದ್ದರು. ಈ ಸಂದರ್ಭ ೬ ಗೀತೆಗಳನ್ನು ಬೆಳಿಗ್ಗೆ ೧೧ ಗಂಟೆಗೆ ಏಕಕಾಲದಲ್ಲಿ ಹಾಡಲಾಯಿತು.ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಮುಳ್ಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಸರಕಾರ ಮತ್ತು ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಶುಕ್ರವಾರ ಕೋಟಿ ಕಂಠ ಗಾಯನ ಆಂದೋಲನ ನಡೆಸುವಂತೆ ಆದೇಶ ನೀಡಿರುವ ಹಿನ್ನೆಲೆ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿಕೊಂಡು ಸಾಮೂಹಿಕವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭ ಹಂಡ್ಲಿ ಕ್ಲಸ್ಟರ್ ಸಿಆರ್‌ಪಿ ಮನೋಹರ್, ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್, ಸಹ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡಿದ್ದರು.ವೀರಾಜಪೇಟೆ ಬಿ.ಜೆ.ಪಿ. ಮಂಡಲ

*ಗೋಣಿಕೊಪ್ಪ: ವೀರಾಜಪೇಟೆ ಬಿ.ಜೆ.ಪಿ. ಮಂಡಲ ವತಿಯಿಂದ ಬಸ್ ನಿಲ್ದಾಣದಲ್ಲಿ ‘ಕೋಟಿ ಕಂಠ ಗಾಯನ' ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸುವ ಭಾಗವಾಗಿ ಪ್ರಯಾಣಿಕರ ಒಟ್ಟಿಗೆ ಕನ್ನಡ ಹಾಡನ್ನು ಹಾಡಲಾಯಿತು. ಮಂಡಲ ಅಧ್ಯಕ್ಷ ನೆಲ್ಲಿರ ಚಲನ್, ಕಾರ್ಯದರ್ಶಿ ವಾಟೇರಿರ ಬೋಪ್ಪಣ್ಣ, ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಜಿಲ್ಲಾ ಖಜಾಂಚಿ ಗುಮ್ಮಟಿರ ಕಿಲನ್ ಗಣಪತಿ, ಗೋಣಿಕೊಪ್ಪ ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ, ಹಕೀಂ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷ ಚೋಡುಮಾಡ ಶರಿನ್ ಸುಬ್ಬಯ್ಯ, ಉಪಾಧ್ಯಕ್ಷೆ ಬೊಳ್ಳಜಿರ ಸುಶೀಲ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೊಟ್ಟಂಗಡ ದಸಮಿ ಸದಾ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.ಜಿಲ್ಲಾ ಪಂಚಾಯಿತಿ ಕಚೇರಿ

ಮಡಿಕೇರಿ: ರಾಜ್ಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮವು ಜರುಗುತ್ತಿದ್ದು, ಕೊಡಗು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿ.ಪಂ. ಅಧಿಕಾರಿ ವೃಂದ ಹಾಗೂ ಸಿಬ್ಬಂದಿಗಳು ಸರ್ಕಾರದ ನಿರ್ದೇಶನದಂತೆ ಕನ್ನಡ ಗೀತೆಗಳ ಗಾಯನ ಮಾಡಿದರು. ಶುಕ್ರವಾರ ನಗರದ ಜಿ.ಪಂ. ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಗೀತೆ ಜೈ ಭಾರತ ಜನನಿಯ ತನುಜಾತೆ, ಹಚ್ಚೇವು ಕನ್ನಡದ ದೀಪ ಮತ್ತು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು.

ಇದರೊಂದಿಗೆ ಜಿ.ಪಂ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಹಳದಿ ಹಾಗೂ ಕೆಂಪು ಬಣ್ಣದ ಉಡುಪಿನೊಂದಿಗೆ ಕಂಗೊಳಿಸಿದ್ದು ವಿಶೇಷವಾಗಿತ್ತು.

ಸಿದ್ದಾಪುರ ಗ್ರಾಮ ಪಂಚಾಯಿತಿ

ಸಿದ್ದಾಪುರ: ಕೋಟಿ ಕಂಠ ಗಾಯನ ಕಾರ್ಯಕ್ರಮವು ಸಿದ್ದಾಪುರದ ಪಂಚಾಯಿತಿಯ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಿದ್ದಾಪುರದ ಗ್ರಾ.ಪಂ. ಪಿ.ಡಿ.ಓ. ಮನ್‌ಮೊಹನ್, ಕಾರ್ಯದರ್ಶಿ ಮೋಹನ್ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಸುಮತಿ, ಯಮುನಾ ಮತ್ತು ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು

ಚೆಟ್ಟಳ್ಳಿ: ‘ನನ್ನ ನಾಡು ನನ್ನ ಹಾಡು’ ಎಂಬ ಶೀರ್ಷಿಕೆಯ ‘ಕೋಟಿ ಕಂಠ ಗಾಯನ’ ವಿಶೇಷ ಕಾರ್ಯಕ್ರಮ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ‘ಕನ್ನಡ ಭಾಷಾ ಸಂಕಲ್ಪ ವಿಧಿ’ಯನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಡಿ.ಕೆ. ಉಷಾ ಬೋಧಿಸಿದರು. ಕನ್ನಡ ನಾಡು, ನುಡಿ, ಪರಂಪರೆ ಕುರಿತು ಹೆಮ್ಮೆ ಅಭಿಮಾನ ಮೂಡಿಸುವ ಕುವೆಂಪು ವಿರಚಿತ ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’, ‘ಬಾರಿಸು ಕನ್ನಡ ಡಿಂಡಿಮ’, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಡಿ.ಎಸ್ ಕರ್ಕಿ ರವರ ‘ಹಚ್ಚೇವು ಕನ್ನಡದ ದೀಪ’, ಚೆನ್ನವೀರ ಕಣವಿ ಅವರ ‘ವಿಶ್ವವಿನೂತನ ವಿದ್ಯಾ ಚೇತನ’ ಮತ್ತು ಹಂಸಲೇಖ ವಿರಚಿತ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಸಾಮೂಹಿಕವಾಗಿ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ವೃಂದ ಸುಶ್ರಾವ್ಯವಾಗಿ ಹಾಡಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಮತ್ತು ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಎಸ್.ಕೆ.ಎಸ್. ವಿದ್ಯಾಸಂಸ್ಥೆ

ಶನಿವಾರಸAತೆ: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಇತ್ಯಾದಿ ಗೀತೆಗಳನ್ನು ಹಾಡಿದರು. ಸಂಸ್ಥೆ ಕಾರ್ಯದರ್ಶಿ ದಿವಾಕರ್, ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷ ಶಾಂತಮಲ್ಲಪ್ಪ, ನಿರ್ದೇಶಕರಾದ ಡಿ. ಭಗವಾನ್, ಹೊನ್ನಮ್ಮ, ನಾಗೇಶ್, ಶಿಕ್ಷಕಿಯರಾದ ಪ್ರೀತಿ, ಶಶಿಕಲಾ ಜತೆಗೂಡಿ ಹಾಡಿದರು.ಶನಿವಾರಸಂತೆ: ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ನಾಡಗೀತೆ ಇತ್ಯಾದಿ ಕನ್ನಡ ಗೀತೆಗಳನ್ನು ಪ್ರಾಂಶುಪಾಲೆ ಸುಜಲಾದೇವಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಹಾಡಿದರು.