ಚೆಟ್ಟಳ್ಳಿ, ಅ. ೨೮: ಹಿಂದೂ ಮಲಯಾಳಿ ಸಮಾಜ ಚೆಟ್ಟಳ್ಳಿ ಇವರ ಆಶ್ರಯದಲ್ಲಿ ಚೆಟ್ಟಳ್ಳಿಯಲ್ಲಿ ೧೪ ನೇ ವರ್ಷದ ಓಣಂ ಆಚರಣೆ ತಾ. ೩೦ ರಂದು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾ. ೩೦ ಬೆಳಿಗ್ಗೆ ೬.೩೦ ರಿಂದ ೯ ಗಂಟೆಯವರೆಗೆ ಪೂಕಳಂ ಸ್ಪರ್ಧೆ ನಡೆಯಲಿದೆ. ೯ ಗಂಟೆಗೆ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಚೆಟ್ಟಳ್ಳಿ ಓಣಂ ಆಚರಣಾ ಸಮಿತಿ ಅಧ್ಯಕ್ಷ ಓ.ಕೆ ಶ್ರೀನಿವಾಸ್, ಹಿಂದೂ ಮಲಯಾಳಿ ಸಮಾಜದ ಮಾಜಿ ಅಧ್ಯಕ್ಷ ಪಿ.ಕೆ ಶಶಿಕುಮಾರ್, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಓಣಂ ಆಚರಣಾ ಸಮಿತಿ ಗೌರವಾಧ್ಯಕ್ಷ ಸರೋಜಿನಿ ಬಾಲನ್ ಭಾಗವಹಿಸಲಿದ್ದಾರೆ. ಬೆಳಿಗ್ಗೆ ೯.೩೦ ಗಂಟೆಗೆ ತ್ಯಾಗತ್ತೂರು ಶ್ರೀ ಪೊನ್ನುಮುತ್ತಪ್ಪ ಚೆಂಡೆಮೇಳ ಇವರ ಚೆಂಡೆ ಮೇಳದೊಂದಿಗೆ ಮಂಗಳ ಸಭಾಂಗಣದಿAದ ಚೆಟ್ಟಳ್ಳಿ ಪಟ್ಟಣದವರೆಗೆ ಶೋಭಾಯಾತ್ರೆ ನಡೆಯಲಿದೆ. ನಂತರ ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ಮಧ್ಯಾಹ್ನ ೧೨:೩೦ ಗಂಟೆಗೆ ಓಣಂ ಸದ್ಯ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮ ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಎನ್. ಚಂದ್ರನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಡಾ. ಮಂಥರ್ ಗೌಡ, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ ವಿಜಯ, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಗೌರವಾಧ್ಯಕ್ಷ ಕೆ.ಎಸ್. ರಮೇಶ್ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಹಿಂದೂ ಮಲಯಾಳಿ ಸಮಾಜದ ಚೆಟ್ಟಳ್ಳಿ ಭಾಗದಲ್ಲಿ ವಿಶೇಷ ಸಾಧನೆಗೈದ ಸಮಾಜ ಬಾಂಧವರು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡ ಲಾಗುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.