ಮಡಿಕೇರಿ, ಅ. ೨೮: ಮಡಿಕೇರಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಗರದ ಬಾಲಭವನದಲ್ಲಿ ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ, ಮಹಾಸಭೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು.

ಉದ್ಘಾಟನೆಯನ್ನು ರಾಮನಗರದ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತ ನಂದ ಸ್ವಾಮೀಜಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ಮಠದಲ್ಲೇ ಇದ್ದು, ಉಪದೇಶ ನೀಡದೆ ಸಮಾಜದಲ್ಲಿನ ಪ್ರತಿ ಕ್ಷೇತ್ರದಲ್ಲೂ ಸಂಚರಿಸಿ ಪ್ರತಿಯೊಬ್ಬ ಶೋಷಿತ ವರ್ಗದವರನ್ನು ಭೇಟಿಯಾಗಿ ಶಿಕ್ಷಣಕ್ಕೆ ಮತ್ತು ಸಂಘಟನೆಗೆ ಒತ್ತು ನೀಡಿದವರು ಎಂದು ಹೇಳಿದರು. ಶೋಷಿತ ವರ್ಗವು ಸ್ವಾಭಿಮಾನದೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕೆಂದರು.

ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಪ್ಯ ಅಕ್ಷಯ್ ಕಾಲೇಜಿನ ಅಧ್ಯಕ್ಷರಾದ ನಡುಬೈಲು ಜಯಂತ್ ಅವರು, ಯುವ ಜನಾಂಗ ಸಮಾಜದ ಬೆಳವಣಿಗೆಗೆ ಪಣ ತೊಡಬೇಕು ಎಂದರು. ಜೀವನದಲ್ಲಿ ಗುರಿಯೊಂದಿಗೆ ಆತ್ಮವಿಶ್ವಾಸವಿದ್ದಲ್ಲಿ ಗೆಲುವು ಸಾಧಿಸಬಹುದೆಂದು ನುಡಿದರು.

ಇನ್ನೋರ್ವ ಅತಿಥಿ ಉಡುಪಿ ಗಾರ್ಡನ್ ಹೊಟೇಲ್ ಉದ್ಯಮಿ ಜಯಂತ್ ಪೂಜಾರಿ ಮಾತನಾಡಿ, ನಮ್ಮ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಂಘಟಿತರಾಗಬೇಕೆAದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷರಾದ ಬಿ.ಎಸ್. ಲೀಲಾವತಿ ವಹಿಸಿ ಮಾತನಾಡಿ, ಸಮಾಜದಲ್ಲಿ ಸಂಘಟನೆಯ ಕೊರತೆ ಇವೆ. ಎಲ್ಲರೂ ಸೇರಿ ಉತ್ತಮ ಸಮಾಜ ನಿರ್ಮಾಣ ಮಾಡ ಬೇಕಾಗಿದೆ. ಸಂಘದ ವತಿಯಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಛದ್ಮವೇಷ, ಚಿತ್ರಕಲಾ ಸ್ಪರ್ಧೆ ಹಾಗೂ ಮಹಿಳೆಯರಿಗೆ ಹೂವಿನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹತ್ತನೇ ತರಗತಿಯಿಂದ ಮೇಲ್ಪಟ್ಟ ತರಗತಿಗಳಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕೊರೊನಾ ವಾರಿರ‍್ಸ್ ಶುಶ್ರೂಷಕಿಯರನ್ನು ಮತ್ತು ಅಬಾಕಾಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಉಪಾಧ್ಯಕ್ಷರಾದ ರವೀಂದ್ರ, ಲಿಂಗಪ್ಪ, ಮಹಿಳಾ ವಿಭಾಗದ ರತ್ನ ವಿಜಯ, ಕಾರ್ಯದರ್ಶಿಯರಾದ ಮನೋಹರ್, ಅರುಣ್‌ಕುಮಾರ್ ಇತರರು ಇದ್ದರು. ಚಸ್ಮಿತಾ ಪ್ರಾರ್ಥಿಸಿ, ಬಿ.ಕೆ. ಮಹೇಶ್ ಸ್ವಾಗತಿಸಿದರು. ನಿರೂಪಣೆ ಮತ್ತು ವಂದನಾರ್ಪಣೆಯನ್ನು ಬಿ.ಎಸ್. ಜಯಪ್ಪ ನೆರವೇರಿಸಿದರು.