ಸೋಮವಾರಪೇಟೆ, ಅ. ೨೮: ಗೌಡಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಾಮಾನ್ಯ ಸಭೆ ಅಧ್ಯಕ್ಷೆ ಜಿ.ಜಿ. ಮಲ್ಲಿಕಾ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ರೂ. ೧.೧೦ ಕೋಟಿ ಮೌಲ್ಯದ ಕಾಮಗಾರಿ ನಡೆದಿದ್ದು ಕಾಮಗಾರಿ ಕಳಪೆಯಾಗಿರುವ ಬಗ್ಗೆ ಗ್ರಾಮೀಣ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಹಲವು ಕಾಲೋನಿಗಳಲ್ಲಿ ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಸಂಬAಧಪಟ್ಟ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲು ಸಭೆ ತೀರ್ಮಾನಿಸಿತು.
ಪಂಚಾಯಿತಿಯ ವ್ಯಾಪ್ತಿಯ ಆಯ್ದ ೭ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ತಾ. ೩೧ ರಂದು ಹರಾಜು ಪ್ರಕ್ರಿಯೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ೧೫ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಗೆ ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು. ಸಭೆಯಲ್ಲಿ ಸದಸ್ಯರಾದ ಕೆ.ಕೆ. ಸುಮಾ, ಅಜ್ಜಳ್ಳಿ ನವೀನ್, ಬಿ.ಎಸ್. ಮಂಜುನಾಥ್, ಜಿ.ಎಸ್. ಪ್ರಸನ್ನ, ಸಿ.ಈ. ವೆಂಕಟೇಶ್, ಕೆ.ಎಂ. ರೋಹಿಣಿ, ಕೆ.ಡಿ. ವಿಶಾಲಾಕ್ಷಿ, ಗೌರಿ, ಪಿಡಿಓ ಲಿಖಿತಾ ಉಪಸ್ಥಿತರಿದ್ದರು.