‘ಕೋಟಿ ಕಂಠ ಗಾಯನ'ಕ್ಕೆ ಚಾಲನೆ, ನಾಡಿನಾದ್ಯಂತ ಪಸರಿಸಿದ ಕನ್ನಡದ ಕಂಪು
ಬೆAಗಳೂರು, ಅ. ೨೮: ೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ ‘ಕೋಟಿ ಕಂಠ ಗಾಯನ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವುದರೊಂದಿಗೆ ನಾಡಿನಾದ್ಯಂತ ಕನ್ನಡದ ಕಂಪು ಪಸರಿಸಿತು. ನಾಡು, ನುಡಿ ಸಂರಕ್ಷಣಾ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಮುಖ್ಯಮಂತ್ರಿ, ಕನ್ನಡದ ಆಯ್ದ ಗೀತೆಗಳಿಗೆ ಧ್ವನಿಗೂಡಿಸಿದರು. ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಸೇರಿದಂತೆ ಒಟ್ಟು ಆರು ಹಾಡುಗಳನ್ನು ಗಾಯಕರು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹಾಗೂ ವಿಧಾನಸೌಧದ ಮುಂದೆ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿ, ಆರು ಕನ್ನಡ ಗೀತೆಗಳನ್ನು ಹಾಡಲಾಯಿತು. ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರೂ ಕನ್ನಡ ಗೀತೆ ಹಾಡುವ ಮೂಲಕ, ನಾವೆಲ್ಲ ಕನ್ನಡಕ್ಕಾಗಿ ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸಿದ್ದಾರೆ. ನ. ೧ ರಂದು ಸಂಭ್ರಮದಿAದ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು, ಅಂದು ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಪುನೀತ್ ರಾಜ್ಕುಮಾರ್ ಅತಿ ಚಿಕ್ಕ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆಯುತ್ತಿರುವ ರತ್ನವಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ರಜನಿಕಾಂತ್, ಜ್ಯೂನಿಯರ್ ಎನ್ಟಿಆರ್ಗೆ ಆಹ್ವಾನ ನೀಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ, ರಾಜ್ಕುಮಾರ್ ಕುಟುಂಬದವರು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಧಾರವಾಡದ ಕಿಮ್ಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು, ಕನ್ನಡದ ಆಯ್ದ ಗೀತೆಗಳನ್ನು ಹಾಡಲಾಯಿತು.
ರಾಜ್ಯದಲ್ಲಿ ೫ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ
ಹುಬ್ಬಳ್ಳಿ, ಅ. ೨೮: ರಾಜ್ಯದಲ್ಲಿ ಶೀಘ್ರದಲ್ಲೇ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ೧೮ ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್ಪೋರ್ಟ್ ನಿರ್ಮಾಣ ಮಾಡಲು ನಮ್ಮ ಸರ್ಕಾರ ಮುಂದಾಗಿದ್ದು, ದಾವಣಗೆರೆ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರಿನಲ್ಲಿ ಏರ್ಪೋರ್ಟ್ ನಿರ್ಮಾಣ ಆರಂಭಗೊಳ್ಳಲಿದೆ ಎಂದರು. ಅಂತೆಯೇ ಜಾಗತಿಕ ಸಮಾವೇಶ ಸಿದ್ಧತೆ ಕುರಿತು ಮಾಹಿತಿ ನೀಡಿದ ಸಚಿವರು, ಬೆಂಗಳೂರಿನಲ್ಲಿ ಜಾಗತಿಕ ಸಮಾವೇಶ ಪ್ರಾರಂಭವಾಗಲಿದ್ದು, ಕಳೆದ ಒಂದು ವರ್ಷದಿಂದ ತಯಾರಿ ಆರಂಭವಾಗಿದೆ. ನವೆಂಬರ್ನಲ್ಲಿ ಜಾಗತಿಕ ಸಮಾವೇಶ ನಡೆಯಲಿದೆ. ಕರ್ನಾಟಕಕ್ಕೆ ಅತೀ ಹೆಚ್ಚು ಬಂಡವಾಳ ಬಂದಿದೆ. ಇದು ಹೆಮ್ಮೆಯ ವಿಷಯ. ನಾವು ಅನೇಕ ಕಡೆ ಕರ್ನಾಟಕದ ಕೈಗಾರಿಕಾ ನೀತಿ ತಿಳಿಸಿದ್ದೇವೆ. ೫ ಲಕ್ಷ ಜನರಿಗೆ ಉದ್ಯೋಗ ಸಿಗುವ ಪ್ರಯತ್ನ ನಾವು ಮಾಡಿದ್ದೇವೆ. ಕರ್ನಾಟಕಕ್ಕೆ ಐದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಹರಿದು ಬರಲಿದೆ. ಕೈಗಾರಿಕೆಗಾಗಿ ೫೦ ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸುತ್ತಮುತ್ತ ೨೦ ಸಾವಿರ ಎಕರೆ, ಉಳಿದ ಭಾಗದಲ್ಲಿ ಕೈಗಾರಿಕೆಗಾಗಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಮತ್ತೆ ಪ್ರಾರಂಭ ಮಾಡಲು ಮುಂದಾಗಿದ್ದೇವೆ. ಆದರೆ ಬೆಂಗಳೂರಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ನಾವು ಸಬ್ಸಿಡಿ ಕೊಡುತ್ತಿಲ್ಲ. ಬಿಯಾಂಡ್ ಬೆಂಗಳೂರು (ಬೆಂಗಳೂರು ಹೊರತಾಗಿ) ಬರುವ ಕಾರ್ಖಾನೆಗಳಿಗೆ ನಾವು ಸೌಲಭ್ಯ ಕೊಡುತ್ತಿದ್ದೇವೆ ಎಂದು ನಿರಾಣಿ ಹೇಳಿದರು. ಹುಬ್ಬಳ್ಳಿಯಲ್ಲಿ ಫಾಸ್ಟ್ ಮೂವಿಂಗ್ ಕನ್ಸ್ಸೂಮರ್ ಗೂಡ್ಸ್ ಕಾರ್ಖಾನೆಗೆ ವಿಶೇಷ ರಿಯಾಯಿತಿ ಕೊಟ್ಟಿದ್ದೇವೆ. ಇದರ ಕ್ರೆಡಿಟ್ ಹೋಗಬೇಕಿರೋದು ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ. ಧಾರವಾಡದ ಮುಮ್ಮಿಗಟ್ಟಿ ಬಳಿ ನಿರ್ಮಾಣ. ಇದು ದೇಶದಲ್ಲಿ ಮೊದಲ ದಿನನಿತ್ಯದ ಬಳಕೆ ವಸ್ತುಗಳ ನಿರ್ಮಾಣ ಮಾಡುವ ಕಾರ್ಖಾನೆ. ಸರ್ಕಾರದಿಂದ ಶೇ. ೨೦ ರಷ್ಟು ರಿಯಾಯಿತಿ ಕೊಡಲಾಗಿದೆ. ಕೋವಿಡ್ ಆದ ಮೇಲೆ ಜಾಗತಿಕ ಸಮಾವೇಶ ನಡಿತಿರೋದು ಕರ್ನಾಟಕದಲ್ಲಿ ಮಾತ್ರ. ಜಾಗತಿಕ ಸಮಾವೇಶದಿಂದ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.