ಭಾಗಮಂಡಲ, ಅ. ೨೯: ೪೨ ವರ್ಷದ ಹಿಂದೆ ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಬದುಕು ಕಟ್ಟಿಕೊಂಡವರು ಇದೀಗ ಒಂದಾಗಿದ್ದಾರೆ!

ಹೌದು.. ೧೯೭೯ -೮೦ರಲ್ಲಿ ಬಲ್ಲಮಾವಟಿಯ ನೆಲಜಿ ಪ್ರೌಢಶಾಲೆ ಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಬಳಿಕ ವಿದ್ಯಾಭ್ಯಾಸ, ವೃತ್ತಿ ಎಂದು ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಿದ್ದ ಸಹಪಾಠಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪಾಲಿಬೆಟ್ಟದ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು.

ಎಡಿಕೇರಿ ರಾಧ ಎಂಬವರು ತಮ್ಮ ಸ್ನೇಹಿತರನ್ನು ಒಂದುಗೂಡಿಸಿ ಈ ಕಾರ್ಯಕ್ರಮ ಏರ್ಪಡಿಸಿದ್ದರು. ಬರೋಬ್ಬರಿ ೪೨ ವರ್ಷದ ಬಳಿಕ ಎಲ್ಲರೂ ಒಗ್ಗೂಡಿ ಹಳೆಯ ದಿನಗಳನ್ನು ಮೆಲುಕು ಹಾಕಿ ಭಾವುಕರಾದರು. ಜೊತೆಗೆ ತಮಗೆ ಅಕ್ಷರ ಕಲಿಸಿ ಇದೀಗ ನಿವೃತ್ತಿ ಜೀವನ ನಡೆಸುತ್ತಿರುವ ಶಿಕ್ಷಕರುಗಳಾದ ಪುಟ್ಟೇಗೌಡ, ನುಚ್ಚಿಮಣಿಯಂಡ ಮಾಚಯ್ಯ, ಬೊಟ್ಟೋಳಂಡ ಸುಬ್ರಮಣಿ ಹಾಗೂ ಟಿ.ಸಿ. ಕುಂಞಮ್ಮ ಮತ್ತು ಪಾಲೆಯಡ ಕಾಳಪ್ಪ ಅವರನ್ನು ಸನ್ಮಾನಿಸುವ ಮೂಲಕ ಗುರು ವಂದನೆ ಸಲ್ಲಿಸಿದರು. ಬಳಿಕ ಮನರಂಜನಾ ಕ್ರೀಡೆಗಳು ನಡೆದವು.