ಕೂಡಿಗೆ, ಅ. ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗಳ ಪಟ್ಟಯನ್ನು ತಯಾರಿಸಲಾಯಿತು. ಅದರನ್ವಯ ಮುಂದಿನ ದಿನಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚೆಗಳು ನಡೆದವು. ವರ್ಗ ೧ ರ ಕ್ರಿಯಾಯೋಜನೆ ಅಡಿಯಲ್ಲಿನ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಗೊಳಿಸಲಾಯಿತು. ಅಲ್ಲದೆ ಸರಕಾರದ ಹೊಸ ಯೋಜನೆಯಾದ ಅಮೃತ ಗ್ರಾಮ ಯೋಜನೆಗೆ ಆಯ್ಕೆಯಾಗಿರುವುದರಿಂದ ಅದಕ್ಕೆ ಸಂಬAಧಿಸಿದ ಕಾಮಗಾರಿಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆಗಳು ನಡೆದವು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಈಗಾಗಲೇ ಸಾಕಾನೆ ಶಿಬಿರವು ಆರಂಭವಾಗಿದೆ ಅಲ್ಲಿನ ಶುಚಿತ್ವದ ಕೆಲಸವನ್ನು ಗ್ರಾಮ ಪಂಚಾಯಿತಿ ಮಾಡುವುದರಿಂದ ಅಲ್ಲಿಗೆ ಬರುವ ಪ್ರವಾಸಿಗರ ವಾಹನಗಳ ನಿಲುಗಡೆಯ ದರ ವಸೂಲಾತಿಯನ್ನು ಗ್ರಾಮ ಪಂಚಾಯಿತಿಗೆ ವಹಿಸುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಅಭಿವೃದ್ಧಿ ಅಧಿಕಾರಿ ತಿಳಿಸಿದರು. ವಸತಿ ರಹಿತ ಫಲಾನುಭವಿಗಳಿಗೆ ಮಂಜೂರು ಆಗಿರುವ ಮನೆಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡುವಂತೆ ಸಭೆಯಲ್ಲಿ ಚರ್ಚಿಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಬಾಸ್ಕರ್‌ನಾಯಕ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.