ಮುಳ್ಳೂರು, ಅ. ೨೮: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕೇಪ ಇದ್ದಲ್ಲಿ ಸಹಕಾರ ಸಂಸ್ಥೆಗಳು ಬೆಳವಣಿಗೆಯಾಗುವುದಿಲ್ಲ ಪಕ್ಷಾತೀತವಾಗಿ ಒಟ್ಟಾಗಿ ಶ್ರಮಿಸಿದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದುತ್ತದೆ’ ಎಂದು ಮಾಜಿ ಕಾನೂನು ಸಚಿವ ಮತ್ತು ಹಿರಿಯ ಸಹಕಾರಿ ಯಂ.ಸಿ. ನಾಣಯ್ಯ ಅಭಿಪ್ರಾಯಪಟ್ಟರು.
ಅವರು ಸಮೀಪದ ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ನೆರವಿನಿಂದ ನಿರ್ಮಿಸಲಾದ ನೂತನ ಬಹುಸೇವಾ ಕೇಂದ್ರ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಶನಿವಾರಸಂತೆ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದರು. ಗ್ರಾಮೀಣ ಭಾಗದ ರೈತರು ಮತ್ತು ಗ್ರಾಮಸ್ಥರ ಸಹಕಾರಕ್ಕಾಗಿ ಸ್ಥಾಪಿತಗೊಂಡಿರುವ ಕೃಷಿ ಪತ್ತಿನ ಸಹಕಾರ ಸಂಘ-ಸAಸ್ಥೆಗಳಿಗೆ ನೂರಾರು ವರ್ಷದ ಇತಿಹಾಸ ಇದ್ದು ಕೊಡಗಿನ ಕೃಷಿ ಪತ್ತಿನ ಸಂಘಗಳು ಸೇರಿದಂತೆ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ರಾಜ್ಯ ಸರಕಾರದ ಅಧೀನದಲ್ಲಿರುವ ಕೃಷಿ ಪತ್ತಿನ ಸಹಕಾರ ಕ್ಷೇತ್ರಗಳ ವಿಚಾರದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ; ಇದರಿಂದ
(ಮೊದಲ ಪುಟದಿಂದ) ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಹಸ್ತ ಕ್ಷೇಪವಾಗಿ ಸಂಘದ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದರು. ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ; ಕೆಡಿಸಿಸಿ ಬ್ಯಾಂಕ್ ಕೃಷಿ ಪತ್ತಿನ ಸಹಕಾರ ಸಂಘಗಳ ಬೆಳವಣಿಗಾಗಿ ಸಾಲ ಸೌಲಭ್ಯ ಒದಗಿಸಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಈ ನಿಟ್ಟಿನಲ್ಲಿ ಹಿರಿಯರು ಕಟ್ಟಿ ಬೆಳೆಸಿರುವ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸಹಕಾರಿಗಳು ಸಹಕರಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಕೊಡಗಿನಲ್ಲಿ ಅತಿವೃಷ್ಟಿ ಹವಾಮಾನ ಬದಲಾವಣೆಯಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಸಹಕಾರ ಸಂಸ್ಥೆಗಳು ಸ್ಪಂದಿಸುವ ಕೆಲಸವಾಗಬೇಕಿದೆ ಎಂದರು. ಸಹಕಾರ ಸಂಸ್ಥೆ ಮೂಲಕ ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಪೂರೈಕೆ ಸೇರಿದಂತೆ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಪಿ.ಗಣಪತಿ ಮಾತನಾಡಿ, ಕೊಡಗಿನಲ್ಲಿರುವ ೭೩ ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ನಬಾರ್ಡ್ ನೆರವಿನಿಂದ ೧೬ ಕೃಷಿ ಪತ್ತಿನ ಸಂಘಗಳಲ್ಲಿ ಬಹುಸೇವಾ ಕೇಂದ್ರ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಈ ಪೈಕಿ ಶನಿವಾರಸಂತೆ ಕೃಷಿ ಪತ್ತಿನ ಸಂಘವು ನಬಾರ್ಡ್ ನೆರವಿನಿಂದ ೧.೫೩ ಕೋಟಿ ವೆಚ್ಚದಲ್ಲಿ ಬಹುಸೇವಾ ಕೇಂದ್ರ ನಿರ್ಮಿಸಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳಿಗೆ ನಡೆಯವ ಚುನಾವಣೆ ಸಂದರ್ಭ ಮಾತ್ರ ರಾಜಕೀಯ ನಡೆಯುತ್ತದೆ ನಂತರ ಪಕ್ಷಾತೀತವಾಗಿ ಸಂಘವನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡುತ್ತಾರೆ. ಇದರಿಂದ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಡಲು ಸಾಧ್ಯವಾಗಿದೆ ಎಂದರು. ಕೊಡಗಿನಲ್ಲಿ ಕಾಡಾನೆ ಹಾವಳಿ ಸೇರಿದಂತೆ ಇತರ ಸಮಸ್ಯೆಗಳು ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸರಕಾರ ಮಟ್ಟದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಸ್.ಸಿ.ಶರತ್ಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎಸ್.ರಮೇಶ್, ನಬಾರ್ಡ್ ಡಿಡಿಎಂ ರಮೇಶ್ ಬಾಬು, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮೋಹನ್, ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಿ.ಕೆ.ಚಿಣ್ಣಪ್ಪ, ಬಿ.ಡಿ.ಮಂಜುನಾಥ್, ಎಸ್.ಬಿ.ಭರತ್ಕುಮಾರ್, ಕೃಷಿ ಪತ್ತಿನ ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಸಿ.ಇ.ಓ ದೊಡ್ಡಯ್ಯ, ಸಿಬ್ಬಂದಿ ಹಾಜರಿದ್ದರು. ನೂತನ ಕಟ್ಟಡ ಮತ್ತು ಬಹುಸೇವಾ ಕೇಂದ್ರ ಲಾಕರ್ ಘಟಕವನ್ನು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಉದ್ಘಾಟಿಸಿದ ಬಳಿಕ ನಿರ್ಗಮಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.
-ಭಾಸ್ಕರ್ ಮುಳ್ಳೂರು