ಕೂಡಿಗೆ, ಅ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮತ್ತು ಕಾಳಿದೇವನ ಹೊಸೂರು ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಘೋಷಣೆ ಮಾಡುವ ಬಗ್ಗೆ ಬೇಡಿಕೆಯ ಬಗ್ಗೆ ವರದಿ ನೀಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಮೈಸೂರಿನ ಮುಖ್ಯ ಆಡಳಿತಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮತ್ತು ಕಾಳಿದೇವನ ಹೊಸೂರುಗಳು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಾಗಿದ್ದು, ಹಾರಂಗಿಯ ಮುಖ್ಯ ನಾಲೆಯು ಈ ಎರಡು ಗ್ರಾಮಗಳ ಮೇಲ್ಭಾಗದಲ್ಲಿ ಹರಿಯುತ್ತಿದೆ. ಕಳೆದ ೨೦ ವರ್ಷಗಳಿಂದಲೂ ಮುಖ್ಯ ನಾಲೆ ಮತ್ತು ಅದರ ಉಪ ನಾಲೆ ಮತ್ತು ಉಪ ಕಾಲುವೆಗಳ ಸಮರ್ಪಕವಾದ ರೀತಿಯಲ್ಲಿ ದುರಸ್ತಿ ಆಗದೆ ನಾಲೆಯ ನೀರು ಜಮೀನಿಗೆ ಸದಾ ಹರಿಯುತ್ತಿರುವುದರಿಂದಾಗಿ ಜಮೀನಿನಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ಭೂಮಿಯು ಜೋಗು ಭೂಮಿಯಾಗಿರುವುದರಿಂದ ಯಾವುದೇ ಬೆಳೆಯು ಬೆಳವಣಿಗೆ ಕಾಣುವುದಿಲ್ಲ.
ಅಲ್ಲದೆ ಈ ವ್ಯಾಪ್ತಿಯ ಮನೆಗಳ ಗೋಡೆಗಳು ಬಿರುಕು ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಅನೇಕ ಮನೆಯ ಗೋಡೆಗಳು ಅತಿಯಾದ ಮಳೆಯ ಸಂದರ್ಭದಲ್ಲಿ ಕುಸಿತಗೊಂಡಿವೆ. ಇದರ ಬಗ್ಗೆ ಕಳೆದ ಎರಡು ವರ್ಷಗಳ ಹಿಂದೆ ಈ ವ್ಯಾಪ್ತಿಯ ರೈತರು ನೀರಾವರಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದಾರೆ. ಆದರೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಕಾರಣದಿಂದ ಈ ಎರಡೂ ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಸರಕಾರ ಮತ್ತು ಕಂದಾಯ ಇಲಾಖೆಯವರೂ ಘೋಷಣೆ ಮಾಡುವಂತೆ ಗ್ರಾಮ ಸಭೆಯಲ್ಲಿ ಈ ಭಾಗದ ರೈತರು ಒತ್ತಾಯ ಮಾಡಿದರು. ಎರಡು ಗ್ರಾಮಗಳ ಗ್ರಾಮಸ್ಥರ ಮತ್ತು ರೈತರ ಮನವಿ ಮೇರೆಗೆ ಮತ್ತು ಪಂಚಾಯಿತಿ ಗ್ರಾಮ ಸಭೆಯ ನಿರ್ಧಾರದಂತೆ ಪತ್ರ ಬರೆಯಲಾಗಿದೆ.
ಕಂದಾಯ ಇಲಾಖೆಗೆ ಸಂಬAಧಿಸಿದ ಭೂ ನಿರ್ವಹಣೆ ಯೋಜನೆಯ ಪ್ರಾದೇಶಿಕ ಆಯುಕ್ತರು ಕಾವೇರಿ ನೀರಾವರಿ ನಿಗಮದ ಅಧೀನಕ್ಕೆ ಒಳಪಡುವ ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿರುವುದರಿಂದ ಅಧಿಕಾರಿ ವರ್ಗದವರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಸಮರ್ಪಕವಾದ ವರದಿಯನ್ನು ನೀಡುವಂತೆ ತಿಳುವಳಿಕೆಯ ಪತ್ರವನ್ನು ಈಗಾಗಲೇ ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತ ಅಧಿಕಾರಿಗೆ ನೀಡಿರುತ್ತಾರೆ. ನೀರಾವರಿ ಇಲಾಖೆಯ ಅಧಿಕಾರಿಗಳ ಸ್ಥಳ ಪರಿಶೀಲನೆಯ ವರದಿಯನ್ನು ಆಧಾರಿಸಿ ನಂತರ ಶೀತ ಪೀಡಿತ ಪ್ರದೇಶಗಳ ಘೋಷಣೆ ಆಗಬೇಕಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ