ಮಡಿಕೇರಿ, ಅ. ೨೮: ಸ್ಥಳೀಯವಾಗಿ ದೊರೆಯುವ ಔಷಧಿ ಸಸ್ಯಗಳು ಹಾಗೂ ಆಹಾರ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರಕಬೇಕಾದರೆ ಮಾರುಕಟ್ಟೆ ವ್ಯವಸ್ಥಿತ ರೂಪ ಪಡೆದುಕೊಳ್ಳಬೇಕು. ಕೊಡಗಿನಲ್ಲಿರುವ ಹಣ್ಣು, ಗಿಡಗಳು ಹಾಗೂ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಇದನ್ನು ಅರಿತು ಮುನ್ನಡೆಯುವಂತೆ ಸಂಪನ್ಮೂಲ ವ್ಯಕ್ತಿಗಳು ಕರೆ ನೀಡಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮತ್ತು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ವತಿಯಿಂದ ಮಡಿಕೇರಿ ಅರಣ್ಯ ವಿಭಾಗದ ಸಹಯೋಗದಲ್ಲಿ ಜೀವವೈವಿಧ್ಯ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ವಿಶೇಷವಾಗಿ ಸಸ್ಯ ಸಂಪತ್ತಿನ ಕುರಿತು ಪಾಲುದಾರರ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಈ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ಔಷಧಿ ಸಸ್ಯಗಳ ಮಾರುಕಟ್ಟೆ ವ್ಯವಸ್ಥೆ ವಿಚಾರದಲ್ಲಿ ಮಾತನಾಡಿದ ನಿವೃತ್ತ ಅರಣ್ಯಾಧಿಕಾರಿ ಹಾಗೂ ಟ್ರೀಲ್ಯಾಂಡ್ ಫೌಂಡೇಶನ್‌ನ ಪ್ರಮುಖ ಕೆ.ಎನ್.ಮೂರ್ತಿ, ದೇಶದಲ್ಲಿ ೯ ಸಾವಿರ ಕೋಟಿ ಕೈಗಾರಿಕೆಗಳು ನೋಂದಣಿಯಾಗಿವೆ. ಇದರಲ್ಲಿ ಬಹುತೇಕ ಪರಿಸರದಿಂದ ದೊರಕುವ ಉತ್ಪನ್ನಗಳನ್ನು ಬಳಸಿಕೊಂಡು ಉದ್ಯಮವನ್ನಾಗಿ ನಡೆಸುತ್ತಿವೆ. ೭,೫೦೦ ಬಗೆಯ ಔಷಧೀಯ ಸಸಿಗಳು ಭಾರತ ದೇಶದಲ್ಲಿದ್ದು, ಇದರಲ್ಲಿ ೧೨೦೦ ಕ್ಕೂ ಹೆಚ್ಚು ಸಸಿಗಳು ಉಪಯೋಗವಾಗುತ್ತಿವೆ. ಈ ಪೈಕಿ ೩೦ ಗಿಡಗಳನ್ನು ಕೃಷಿಯಾಗಿ ಬೆಳೆಯಲ್ಪಡುತ್ತಿವೆ. ಹಲವು ಉತ್ಪನ್ನಗಳು ಸ್ಥಳೀಯವಾಗಿ ಮಾರಾಟವಾಗುತ್ತಿವೆ ಎಂದು ಮಾಹಿತಿ ನೀಡಿದರು.
ಹಲವು ಸಸ್ಯಗಳ ಬಳಕೆಯ ಬಗ್ಗೆ ನಾಟಿ ವೈದ್ಯರು ಗೌಪ್ಯತೆ ಕಾಪಾಡಿಕೊಂಡ ಪರಿಣಾಮ ಇಂದು ಹಲವು ಗಿಡ, ಮರಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ತಿಳಿದ ಗಿಡಮೂಲಿಕೆಗಳ ಬೆಳವಣಿಗೆಗೆ ಪ್ರತಿಯೊಬ್ಬರು ಮುಂದಾಗಬೇಕೆAದು ಕರೆ ನೀಡಿದ ಅವರು, ಉದ್ಯಮಗಳಿಗೆ ಪೂರೈಕೆಯಾಗುವ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಇಲ್ಲದಿರುವುದು ಕೂಡ ಔಷಧೀಯ ಸಸ್ಯಗಳ ನಾಶಕ್ಕೆ ಕಾರಣವಾಗಿದೆ. ಆದಾಯದ ಮೂಲ ದೊರೆತರೆ ಬೇಡಿಕೆಗೆ ಅನುಗುಣವಾಗಿ ಸಸಿಗಳು ದೊರಕುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿಯಲ್ಲಿ ಯಶಸ್ಸು ಸಾಧಿಸಿದ ಕುರಿತ ‘ಯಶೋಗಾಥೆ’ ಗೋಷ್ಠಿಯಲ್ಲಿ ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಬಿ.ಎನ್. ಸತೀಶ್, ಪ್ರಪಂಚ ವ್ಯಾಪ್ತಿ ೪೨೦೦ ಬಗೆಯ ಕಾಡುಹಣ್ಣುಗಳಿವೆ. ಈ ಪೈಕಿ ಏಷ್ಯಾಖಂಡದಲ್ಲಿ ೨೬೧ ಹಣ್ಣುಗಳಿವೆ. ಕೊಡಗು ಜಿಲ್ಲೆಯಲ್ಲಿ ೬೫ ಬಗೆಯ ಕಾಡುಹಣ್ಣುಗಳಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಜಿಲ್ಲೆಯಲ್ಲಿ ದೊರಕುವ ಕಾಡುಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ಈ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆರೋಗ್ಯಕ್ಕೆ ಪೂರಕವಾದ ಹಣ್ಣುಗಳು ನಮ್ಮ ಸುತ್ತಮುತ್ತಲ್ಲಿದ್ದರೂ ಅದರ ಮಹತ್ವ ಅರಿಯದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು. ಕಾಚಂಪುಳಿಯAತೆ ಅನೇಕ ಹಣ್ಣುಗಳು ಆದಾಯದ ಮೂಲವಾಗಿವೆ. ಈ ಬಗ್ಗೆ ತರಬೇತಿ ಹಾಗೂ ಅಧ್ಯಯನದ ಅಗತ್ಯತೆ ಇದೆ ಎಂದು ವಿವರಿಸಿದರು.
ಪ್ರಗತಿಪರ ಕೃಷಿಕ ನಾಪಂಡ ಪೂಣಚ್ಚ ಮಾತನಾಡಿ, ಪ್ರಗತಿಪರ ರೈತರಾಗುವ ಜೊತೆ ಪ್ರಕೃತಿಪರ ರೈತರಾಗಬೇಕು. ಕೊಡಗಿನ ಕರಿಮೆಣಸು ಇಂದು ಜಾಗತಿಕ ಮಟ್ಟದಲ್ಲಿ ‘ಬ್ಲಾö್ಯಕ್ ಡೈಮೆಂಟ್’ ಎಂಬ ಖ್ಯಾತಿ ಪಡೆದುಕೊಂಡಿದೆ. ಎಲ್ಲಾ ರೈತರು ಮಾರುಕಟ್ಟೆಯನ್ನು ಅರಿತು, ವ್ಯವಸ್ಥಿತವಾಗಿ ಬೆಳೆ ಬೆಳೆದರೆ ಆದಾಯದ ಜೊತೆಗೆ ಬೆಳೆಗಳಿಗೂ ಮನ್ನಣೆ ದೊರೆಯುತ್ತದೆ ಎಂದರು.
ಪ್ರಗತಿಪರ ರೈತ ಮಂದ್ರೀರ ತೇಜಸ್ ನಾಣಯ್ಯ ಮಾತನಾಡಿ, ಉದ್ಯೋಗ ದೊರೆಯದೆ ಯುವಜನತೆ ಹತಾಶರಾಗದೆ ಕೃಷಿಯತ್ತ ಒಲವು ಮೂಡಿಸಿಕೊಳ್ಳಿ. ಕೃಷಿ ಇಂದು ದೇಶದ ಆರ್ಥಿಕ ಪರಿಸ್ಥಿತಿಯ ಬೆನ್ನೆಲುಬಾಗಿದೆ. ಕೆಲವೊಂದು ಸಮಸ್ಯೆಗಳ ನಡುವೆಯೂ ಕೃಷಿ ಲಾಭಾದಾಯಕವಾಗಿದೆ ಎಂದು ತಿಳಿಸಿದರು.
ಯಶಸ್ವಿ ಕೃಷಿ ಅರಣ್ಯ ನೆಡುತೋಪು ಕುರಿತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ವರಪ್ಪ, ಕೊಡಗಿನ ಔಷಧಿ ಸಸ್ಯ ಸಂಪತ್ತು ಮತ್ತು ಅವುಗಳ ಕೃಷಿ ಕುರಿತು ಔಷಧಿ ಸಸ್ಯ ಸಲಹೆಗಾರ ಎಂ.ಜೆ. ಪ್ರಭು ವಿಚಾರ ಮಂಡಿಸಿದರು.