ಪೊನ್ನಂಪೇಟೆ, ಅ. ೨೮: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಎನ್ಸಿಸಿ ಕೆಡೆಟ್ ಸಿ.ಆರ್. ಸೋನ ತನ್ನ ಮನೆಯ ಸಮೀಪದ ತೋಡು ಬದಿಯಲ್ಲಿ ರಾಶಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲಿಗಳು, ಬಟ್ಟೆ ಹಾಗೂ ಇನ್ನಿತರ ಕಸಗಳನ್ನು ತೆಗೆದು ಸ್ವಚ್ಛ ಮಾಡಿ ಪರಿಸರ ಕಾಳಜಿಯನ್ನು ತೋರುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಚೊಟ್ಟೆಯಂಡ ರೋಹಿತ್ ಮತ್ತು ವಸಂತಿ ದಂಪತಿಯ ಪುತ್ರಿ ಸೋನ ತಾನು ಪ್ರತಿ ದಿನ ವಾಯುವಿಹಾರಕ್ಕೆ ತೆರಳುವ ಸಂದರ್ಭ ಬೇಟೋಳಿ ಗ್ರಾಮದ ತೋಡಿನಲ್ಲಿ ಜನರು ಎಸೆದು ಹೋಗಿದ್ದ ಕಸದ ರಾಶಿಯನ್ನು ನೋಡಿ ಅದನ್ನು ಸ್ವಚ್ಛ ಮಾಡಲು ನಿರ್ಧರಿಸಿದಳು. ಕೆಲವು ದಿನಗಳ ಹಿಂದೆ ಕಾಲೇಜಿಗೆ ರಜೆ ಇದ್ದ ಸಂದರ್ಭ ತಾನೊಬ್ಬಳೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿ, ಸಾರ್ವಜನಿಕರು ನೀರಿಗೆ ಎಸೆದಿದ್ದ ೧೧ ಚೀಲಗಳಷ್ಟು ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಆ ಸ್ಥಳವನ್ನು ಸ್ವಚ್ಛ ಮಾಡಿದ್ದಾಳೆ. ‘ಶಕ್ತಿ'ಯೊಂದಿಗೆ ತನ್ನ ಅನಿಸಿಕೆ ಹಂಚಿಕೊAಡಿರುವ ಈಕೆ ಎಲ್ಲೆಂದರಲ್ಲಿ ಕಸ ಎಸೆದು ನೀರಿನ ಮೂಲಗಳನ್ನು ಕಲುಷಿತಗೊಳಿಸದೆ, ಸ್ವಚ್ಛತೆಯನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಪ್ರಸ್ತುತ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಿ.ಆರ್. ಸೋನಳ ಸ್ವಚ್ಛತಾ ಕಾರ್ಯಕ್ಕೆ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಹಾಗೂ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಸಿಬ್ಬಂದಿ, ಪೋಷಕರು, ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಚನ್ನನಾಯಕ