ಸಿದ್ದಾಪುರ, ಅ. ೨೮: ಮಡಿಕೇರಿ ತಾಲೂಕಿನ ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಐದ್ರೋಡಮ್ಮ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಕಾರ್ಮಿಕರ ಮತ್ತು ಗ್ರಾಮಸ್ಥರನ್ನು ಸಂರಕ್ಷಣೆ ಮಾಡಿಕೊಂಡು ವರ್ಷದಲ್ಲಿ ದೀಪಾವಳಿ ದಿನದ ಅಮವಾಸ್ಯೆ ದಿನದಿಂದ ಆರಂಭವಾಗಿ ಮುಂದಿನ ದಿನದ ಸಂಜೆಯವರೆಗೆ ವಿವಿಧ ಪೂಜಾ ವಿಧಿವಿಧಾನಗಳು ದೇವಾಲಯದ ಶ್ರೀ ದೇವಿಗೆ ಸಲ್ಲುತ್ತದೆ.

ಭಕ್ತರು ಹರಕೆಗಳನ್ನು ಹೊತ್ತು ದೇವಾಲಯಕ್ಕೆ ಆಗಮಿಸಿ ಶ್ರೀ ದೇವಿಗೆ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಮೊರೆ ಹೋಗುವುದು ವಾಡಿಕೆಯಾಗಿದೆ. ಉತ್ಸವಾದಿ ಕಾಲದಲ್ಲಿ ಪುರೋಹಿತ ವರ್ಗದಿಂದ ಅಮವಾಸ್ಯೆ ದಿನದ ರಾತ್ರಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮರುದಿನ ಪ್ರಾತಃ ಕಾಲದಿಂದ ಅಭಿಷೇಕ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ ಸಲ್ಲಿಸಲಾಯಿತು.

ಅರೆಕಾಡು, ಅಭ್ಯತ್‌ಮಂಗಲ, ಸಿದ್ದಾಪುರ, ಹೊಸ್ಕೇರಿ, ಮರಗೋಡು, ಕಟ್ಟೆಮಾಡು ಗ್ರಾಮಗಳು ಸೇರಿದಂತೆ ಕೊಡಗಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವದ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಆರ್. ರಮೇಶ್ ಮಾತನಾಡಿ, ಸುಮಾರು ೧೫೦ ವರ್ಷಗಳ ಹಿಂದೆ ಹಾಲು ಮರದ ತಟದಲ್ಲಿ ಪುಟ್ಟದಾದ ಕಲ್ಲಿನ ವಿಗ್ರಹಗಳಿಗೆ ಪೂಜೆ ಸಲ್ಲಿಕೆಯಾಗುತ್ತಿತ್ತು.

ವರ್ಷಗಳು ಉರುಳಿದಂತೆ ದೇವಿಯ ವಿಶೇಷವಾದ ಶಕ್ತಿ ಮತ್ತು ಅಭಯದಿಂದ ಕಿರಿದಾಗಿದ್ದ ಗುಡಿಯಿಂದ ದೇವಾಲಯವು ನಿರ್ಮಾಣವಾಗಿದೆ. ಈ ಮೊದಲು ಸಣ್ಣ ಪ್ರಮಾಣದಲ್ಲಿ ಭಕ್ತರು ಉತ್ಸವಕ್ಕೆ ಆಗಮಿಸುತ್ತಿದ್ದರು. ಇದೀಗ ದೇವಿಯ ಮಹಿಮೆಯಿಂದ ವರ್ಷದಿಂದ ವರ್ಷ ಭಕ್ತರ ಸಂಖ್ಯೆ ಅಧಿಕಗೊಂಡು ಇದೀಗ ೮೦೦೦ಕ್ಕೂ ಅಧಿಕವಾಗಿ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದಾರೆ ಎಂದರು. ಉತ್ಸವ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಉಸ್ತುವಾರಿಗಳಾದ ನೆಲ್ಲಮಕ್ಕಡ ಪ್ರಕಾಶ್, ಕೋಶಾಧಿಕಾರಿ ಲೋಕೇಶ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.