ಪೊನ್ನಂಪೇಟೆ, ಅ. ೨೭: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-೨೦೨೨ ವಿತರಣೆ ಮತ್ತು ಸನ್ಮಾನ ಸಮಾರಂಭವನ್ನು ತಾ. ೩೦ ರಂದು ವೀರಾಜಪೇಟೆಯಲ್ಲಿ ಅಯೋಜಿಸಲಾಗಿದೆ ಎಂದು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ತಿಳಿಸಿದ್ದಾರೆ. ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಕೆ.ಎಂ.ಎ. ವತಿಯಿಂದ ಪ್ರತಿವರ್ಷ ನಡೆಸಲಾಗುವ ಈ ಕಾರ್ಯಕ್ರಮವನ್ನು ಕೋವಿಡ್ ನಿರ್ಬಂಧದಿAದಾಗಿ ಕಳೆದ ೨ ವರ್ಷಗಳಿಂದ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ತಲಾ ಓರ್ವ ಸಾಧಕ ವಿದ್ಯಾರ್ಥಿಗೆ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಯೋಜನೆಯನ್ನು ವಿಶೇಷವಾಗಿ ಈ ಸಾಲಿನಿಂದ ಆರಂಭಿಸಲಾಗಿದೆ. ಈ ವಿಶೇಷ ಪ್ರತಿಭಾ ಪುರಸ್ಕಾರವನ್ನು ಎನ್.ಸಿ.ಟಿ. ಗ್ರೂಪ್ ಮಾಲೀಕ ಅಕ್ಕಳತಂಡ ಎಸ್. ಮೊಯಿದು ಅವರು ತಮ್ಮ ದಿವಂಗತ ಸಹೋದರರಾದ ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥ ಪ್ರಾಯೋಜಿಸಿದ್ದು, ಇದನ್ನು ಪ್ರತಿವರ್ಷ ಮುಂದುವರಿಸಲಾಗುವುದು ಎಂದು ಸೂಫಿ ಹಾಜಿ ಅವರು ಮಾಹಿತಿ ನೀಡಿದರು.

ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶನಿವಾರಸಂತೆಯ ಎಸ್. ಪೂರ್ವಿ ಜಗದೀಶ್ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾಯಮುಡಿಯ ಕೆ.ಸಿ. ಕವಿನ ಅವರನ್ನು ಆಹ್ವಾನಿಸಿ ಈ ವಿಶೇಷ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಈ ವಿಶೇಷ ಪ್ರತಿಭಾ ಪುರಸ್ಕಾರವು ರೂ. ೧೦,೦೦೦ ನಗದು ಬಹುಮಾನ ಸೇರಿದಂತೆ ಆಕರ್ಷಕ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ., ಎಸ್.ಎಸ್.ಎಲ್.ಸಿ. ಹಾಗೂ ಮದರಸಾ ವಿಭಾಗದ ೫ನೇ, ೭ನೇ ಮತ್ತು ೧೦ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿರುವ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಪಾರಿತೋಷಕ ಮತ್ತು ನಗದು ಬಹುಮಾನಗಳೊಂದಿಗೆ ನೀಡಿ ಅವರನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸ ಲಾಗುವುದು ಎಂದು ಸೂಫಿ ಹಾಜಿ ಹೇಳಿದರಲ್ಲದೆ, ಕೆ.ಎಂ.ಎ. ವತಿಯಿಂದ ಜರುಗುವ ಪ್ರತಿಭಾ ಪುರಸ್ಕಾರ ವಿತರಣೆ ಎಂಬ ವಾರ್ಷಿಕ ಕಾರ್ಯಕ್ರಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಅಭಿವೃದ್ದಿಗೊಳಿಸುವ ಜೊತೆಗೆ ಜನಾಂಗದವರನ್ನು ಪ್ರತಿ ವರ್ಷ ಒಂದೆಡೆ ಸೇರಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.ವೀರಾಜಪೇಟೆಯ ಸೆರಿನಿಟಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಯಿAದ ನಡೆಯುವ ಸಮಾರಂಭವನ್ನು ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕರ್ನಾಟಕದ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್, ಹಿರಿಯ ವಕೀಲರಾದ ಎ.ಎಸ್. ಪೊನ್ನಣ್ಣ ಮತ್ತು ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷö್ಮಣ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದ ಸೂಫಿ ಅವರು, ಮೂರ್ನಾಡಿನ ಹಿರಿಯ ವೈದ್ಯರಾದ ಡಾ. ಜೋಯಿಪೆರ ಎ. ಕುಂಞಬ್ದುಲ್ಲ ಮತ್ತು ಮುಂಬೈನಲ್ಲಿ ಉದ್ಯಮಿ ಗಳಾಗಿರುವ ಅಕ್ಕಳತಂಡ ಎಸ್. ಮೊಯ್ದು ಅವರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ, ಪದಾಧಿಕಾರಿಗಳಾದ ಕುವೇಂಡ ವೈ. ಆಲಿ, ಚಿಮ್ಮಿಚ್ಚೀರ ಕೆ. ಇಬ್ರಾಹಿಂ (ಉಮ್ಣಿ), ಕರ್ತೊರೆರ ಕೆ. ಮುಸ್ತಫಾ ಉಪಸ್ಥಿತರಿದ್ದರು.