ಸೋಮವಾರಪೇಟೆ, ಅ.೨೫ : ಕಾಡಾನೆಗಳು ಭತ್ತದ ಗದ್ದೆಗೆ ನುಗ್ಗಿ ಪೈರನ್ನು ತಿಂದು, ತುಳಿದು ನಾಶಗೊಳಿಸಿರುವ ಘಟನೆ ಹೆಗ್ಗುಳ ಗ್ರಾಮದಲ್ಲಿ ನಡೆದಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದ ಎಚ್.ಎಸ್.ಕಿರಣ್ ಎಂಬವರ ಗದ್ದೆಯಲ್ಲಿ ಭತ್ತದ ಪೈರನ್ನು ಕಾಡಾನೆಗಳು ತಿಂದು ನಷ್ಟಗೊಳಿಸಿವೆ.
ಈಗಾಗಲೆ ಭತ್ತ ಹೂವಾಗಿ ಕಾಳುಕಟ್ಟುವ ಸಂದರ್ಭದಲ್ಲಿ ಪೈರನ್ನು ತಿಂದಿರುವುದರಿAದ ಸಂಪೂರ್ಣ ಫಸಲು ಹಾನಿಯಾಗಿದೆ ಎಂದು ಕಿರಣ್ ಹೇಳಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಿಡ್ತ, ಮಾಲಂಬಿ ಜೇನುಕಲ್ಲುಬೆಟ್ಟ ಮೀಸಲು ಅರಣ್ಯಗಳಿಂದ ಆಹಾರ ಅರಸಿ ಭತ್ತದ ಗದ್ದೆಗೆ ಧಾಳಿಯಿಡುತ್ತಿರುವ ಕಾಡಾನೆಗಳು ಕಾಫಿ, ಕಾಳುಮೆಣಸು ಬಳ್ಳಿ, ಅಡಿಕೆ, ಹಾಗೂ ಬಾಳೆ ಗಿಡಗಳಿಗೆ ಹಾನಿ ಮಾಡುತ್ತಿವೆ ಎಂದು ಕೃಷಿಕರು ದೂರಿದ್ದಾರೆ.
ದೊಡ್ಡಮಳ್ತೆ ಗ್ರಾಮ ಸಮೀಪ ಅಳವಡಿಸಿರುವ ರೈಲ್ವೆ ಕಂಬಿಗಳನ್ನು ಬಗ್ಗಿಸಿ, ಕಾಡಾನೆಗಳು ಕೃಷಿ ಭೂಮಿಗೆ ಲಗ್ಗೆಯಿಟ್ಟಿವೆ ಎಂದು ಕಾಫಿ ಬೆಳೆಗಾರ ಚಂಗಪ್ಪ ತಿಳಿಸಿದ್ದಾರೆ. ಅವರ ಕಾಫಿ ತೋಟದಲ್ಲಿ ಅಳವಡಿಸಿದ್ದ ನೀರಿನ ಪೈಪ್ಗಳು, ಕಾಫಿ ಗಿಡ, ಬಾಳೆಯನ್ನು ತುಳಿದು ನಾಶಪಡಿಸಿವೆ. ಲೋಕೇಶ್ ಎಂಬವರ ೫೦ ಅಡಿಕೆ ಗಿಡಗಳನ್ನು ತುಳಿದು ನಾಶಪಡಿಸಿವೆ.
ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ ಗ್ರಾಮದಿಂದ ದೊಡ್ಡಮಳ್ತೆ ಮಾರ್ಗವಾಗಿ ವಳಗುಂದವರೆಗೆ ಅರಣ್ಯದಂಚಿನಲ್ಲಿ ನಾಲ್ಕು ಕಿ.ಮೀ. ಆನೆ ಕಂದಕ ನಿರ್ಮಿಸಲಾಗಿದೆ. ಕೆಲ ಭಾಗದಲ್ಲಿ ಕಲ್ಲುಬಂಡೆ ಸಿಕ್ಕಿದ ಕಡೆ ಕಂದಕ ಮಾಡಿಲ್ಲ. ಅಂತಹ ಕಡೆಗಳಲ್ಲಿ ರೈಲ್ವೆ ಕಂಬಿ ಅಳವಡಿಸಿ, ಕಬ್ಬಿಣದ ಸರಳು ಹಾಕಲಾಗಿದೆ. ಇಂತಹ ಸ್ಥಳಗಳಲ್ಲಿ ಕಂಬಗಳನ್ನು ಬಗ್ಗಿಸಿ ಕಾಡಾನೆಗಳು ಗ್ರಾಮ ಪ್ರವೇಶ ಮಾಡುತ್ತಿವೆ. ಕಂದಕಗಳನ್ನು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಕಾಡಾನೆಗಳ ಉಪಟಳವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಚಂಗಪ್ಪ ಆರೋಪಿಸಿದ್ದು, ಕೂಡಲೆ ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.