ಮಡಿಕೇರಿ, ಅ. ೨೪ : ತಾಲೂಕು ಆಡಳಿತ ಒಂದೆ ಸೂರಿನಡಿ ದೊರಕಲಿ ಎಂದು ಸರಕಾರ ಯೋಜನೆ ರೂಪಿಸಿ ಪ್ರತಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಿತ್ತು. ಅದೇ ರೀತಿ ಮಡಿಕೇರಿ ಯಲ್ಲಿಯೂ ಯೋಜನೆ ಶುರುವಾಯಿತು. ಆದರೆ, ಕೆಲ ಆಡಳಿತದ ತಾಂತ್ರಿಕ ಕಾರಣದಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಪೂರ್ಣಗೊಳ್ಳದೆ ಅರೆಬರೆ ಸ್ಥಿತಿಯಲ್ಲಿತ್ತು. ಇದೀಗ ೨ನೇ ಹಂತದ ಕಾಮಗಾರಿ ಚುರುಕು ಪಡೆದುಕೊಂಡಿದ್ದು, ಈ ಬಾರಿಯಾದರು ಮಿನಿವಿಧಾನಸೌಧ ಯೋಜನೆಗೆ ಕಾಯಕಲ್ಪ ದೊರಕುತ್ತದೆ ಎಂಬ ನಿರೀಕ್ಷೆ ಜನರಲ್ಲಿ ಸೃಷ್ಟಿಯಾಗಿದೆ.

ಮಡಿಕೇರಿ ನಗರದ ಕಾನ್ವೆಂಟ್ ಜಂಕ್ಷನ್ ಬಳಿಯ ೧.೫ ಎಕರೆ ಪ್ರದೇಶದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ೨೦೧೬ರಲ್ಲಿ ಆರಂಭ ಗೊಂಡಿತು. ಮೊದಲ ಹಂತದಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪ್ರಸ್ತಾವನೆ ಪಡೆದುಕೊಂಡು ಕಟ್ಟಡ ತಲೆಎತ್ತಲು ಆರಂಭಿಸಿತು. ಸುತ್ತಲೂ ಗೋಡೆ, ಸ್ಲಾö್ಯಬಿಂಗ್ ಸೇರಿದಂತೆ ಇನ್ನಿತರ ಕೆಲಸಗಳು ನಡೆದಿದ್ದವು. ಉಳಿದ ಕಾಮಗಾರಿ ಕೆಲ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡು ಮಿನಿ ವಿಧಾನಸೌಧ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಇದೀಗ ಗಂಗಾವತಿ ಮೂಲದ ಲಕ್ಷಿö್ಮನಾರಾಯಣ ಗುತ್ತಿಗೆ ಸಂಸ್ಥೆ ೨ನೇ ಹಂತದ ಕಾಮಗಾರಿ ವಹಿಸಿಕೊಂಡು ಕೆಲಸ ಆರಂಭಿಸಿದೆ.

ಆರಂಭದಿAದ ಅಡೆತಡೆ

ಕಟ್ಟಡ ಕಾಮಗಾರಿಗೆ ಕಂದಾಯ ಇಲಾಖೆಯ ನಿರ್ದೇಶನದಂತೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿಕಾರಿಗಳ ಉಸ್ತುವಾರಿಯಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯೊAದು ೨೦೧೬ರಲ್ಲಿ ಕೆಲಸ ಆರಂಭಿಸಿತ್ತು. ಆರಂಭದಲ್ಲಿ ಮಿನಿ ವಿಧಾನಸೌಧಕ್ಕೆ ನೀಡಲಾಗಿರುವ ಜಾಗದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಕಾಮಗಾರಿ ಆರಂಭಗೊAಡ ಕೆಲ ಸಮಯದಲ್ಲಿ ನಿವೇಶನದಲ್ಲಿ ನಿರಂತರ ಜಲಮೂಲ ಸಮಸ್ಯೆ, ಮಳೆಗಾಲದಲ್ಲಿ ಇಡೀ ಪ್ರದೇಶ ಕೆಸರುಮಯವಾಗಿ ಪರಿವರ್ತನೆಗೊಂಡ ಪರಿಣಾಮ ಹಲವು ಸಮಯ

(ಮೊದಲ ಪುಟದಿಂದ) ಕೆಲಸ ಮುಂದುವರೆಯಲೇ ಇಲ್ಲ. ಇದೆಲ್ಲದರ ನಡುವೆ ಸುಮಾರು ೨೨ ಅಡಿಯಷ್ಟು ಆಳಕ್ಕೆ ನಿವೇಶನದಲ್ಲಿ ಮಣ್ಣು ತೆರವುಗೊಳಿಸಲಾಯಿತು. ಆ ಮುಖಾಂತರ ಆಳದಿಂದ ಕಬ್ಬಿಣದ ಸಲಾಕೆಗಳ ಬಳಕೆಯೊಂದಿಗೆ ನುರಿತರ ಸಲಹೆಯಂತೆ ೨೦ ಅಡಿ ಕಾಂಕ್ರಿಟ್ ಬಿಡ್‌ನಿಂದ ಕೂಡಿದ ಪಿಲ್ಲರ್ ನಿರ್ಮಿಸಲಾಯಿತು. ಹೀಗೆ ನಾಲ್ಕು ಅಡಿಯಷ್ಟು ಮೊದಲ ಹಂತದ ಕಾಂಕ್ರಿಟ್ ಬಿಡ್ ನಿರ್ಮಿಸುವುದ ರೊಂದಿಗೆ ಆ ಹಂತದಲ್ಲಿ ಮಣ್ಣನ್ನು ತುಂಬಿ ನಿವೇಶನವನ್ನು ಸಮತಟ್ಟು ಗೊಳಿಸಲಾಯಿತು. ಮೊದಲ ಹಂತದಲ್ಲಿ ಕೆಲ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಎರಡು ಅಂತಸ್ತಿನ ಸ್ಲ್ಯಾಬ್ ಪೂರ್ಣಗೊಂಡು, ಮುಂದಿನ ಕೆಲಸವನ್ನು ಅನುದಾನ ಕೊರತೆಯಿಂದ ಸ್ಥಗಿತಗೊಳಿಸಲಾಯಿತು. ಜೊತೆಗೆ ಅನುದಾನದ ಪ್ರಮಾಣವೂ ಹೆಚ್ಚಾಯಿತು. ಗುತ್ತಿಗೆ ಪಡೆದವರು ಕೆಲಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಯೋಜನೆಯಿಂದ ಹಿಂದೆ ಸರಿದರು. ಕಟ್ಟಡದ ವಿನ್ಯಾಸವನ್ನು ಮಂಗಳೂರು ಮೂಲದ ಕಂಪನಿ ಮಾಡಿಕೊಟ್ಟಿದ್ದು, ಇದರಂತೆ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ.

೧೧ ತಿಂಗಳಿನಲ್ಲಿ ಮುಗಿಸುವ ಗುರಿ

ಇದೀಗ ೨ನೇ ಹಂತದ ಕೆಲಸ ಪ್ರಾರಂಭಗೊAಡಿದ್ದು, ಕಾಮಗಾರಿಯನ್ನು ೧೧ ತಿಂಗಳಿನೊಳಗೆ ಮುಗಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ಹೆಚ್ಚುವರಿ ರೂ. ೪ ಕೋಟಿ ಅನುದಾನದ ಲಭ್ಯತೆ ಇದೆ. ಹೊಸದಾಗಿ ಗುತ್ತಿಗೆ ಪಡೆದ ಕಂಪೆನಿ ರೂ. ೧ ಕೋಟಿ ವೆಚ್ಚದಲ್ಲಿ ಕೆಲಸಗಳು ಮಾಡಿದ್ದು, ಇದರಲ್ಲಿ ಸ್ಲಾö್ಯಬಿಂಗ್, ರೂಫಿಂಗ್ ಕೆಲಸಗಳು ಒಳಗೊಂಡಿವೆ. ಇದುವರೆಗೂ ಸರಕಾರದಿಂದ ೨ನೇ ಹಂತದ ಹಣ ಬಿಡುಗಡೆಗೊಂಡಿಲ್ಲ.

ಮೂರು ಅಂತಸ್ತನ್ನು ಒಳಗೊಂಡಿರುವ ಕಟ್ಟಡ ಕಂದಾಯ ಇಲಾಖೆಗೆ ಸಂಬAಧಿಸಿದ ಎಲ್ಲ ಕಚೇರಿಗಳನ್ನು ಒಳಗೊಳ್ಳಲಿದೆ. ಮೀಟಿಂಗ್ ಹಾಲ್, ಸಬ್ ರಿಜಿಸ್ಟಾçರ್ ಕಚೇರಿ, ಕಂದಾಯ ಇಲಾಖೆಯ ಖಜಾನೆ, ಪಹಣಿ ಕೇಂದ್ರ, ಶಾಸಕರ ಕಚೇರಿಗಳು, ಆರ್‌ಟಿಸಿ ನೀಡುವ ಸಿಬ್ಬಂದಿ ಕಚೇರಿ, ಚುನಾವಣೆ ಸಂದರ್ಭ ಸಭೆ ನಡೆಸಲು ಸಭಾಂಗಣ ನಿರ್ಮಾಣದ ಯೋಜನೆಯನ್ನು ಮಿನಿ ವಿಧಾನಸೌಧ ಒಳಗೊಂಡಿದೆ.

ಆಡಳಿತ ಶಕ್ತಿ ಕೇಂದ್ರವಾಗಬೇಕಾದ ಈ ಕಟ್ಟಡ ಇಂದಿಗೂ ಮಂದಗತಿಯಲ್ಲಿ ಸಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅರೆಬರೆ ಸ್ಥಿತಿಯಲ್ಲಿರುವ ಕಟ್ಟಡ ಎಂದು ಪೂರ್ಣಗೊಳ್ಳುತ್ತೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಆರಂಭಗೊAಡ ಕಾಮಗಾರಿ ನೆನೆಗುದಿಗೆ ಬೀಳದೆ ಜನಪ್ರತಿನಿಧಿಗಳು ಹಾಗೂ ಸರಕಾರ ಇಚ್ಛಾಶಕ್ತಿ ಮೆರೆದು ಕಟ್ಟಡ ಪೂರ್ಣಗೊಳಿಸಲು ಮುಂದಾಗಬೇಕಾಗಿದೆ ಎಂಬುದು ಜನರ ಆಶಯವಾಗಿದೆ.

- ಹೆಚ್.ಜೆ. ರಾಕೇಶ್