ವೀರಾಜಪೇಟೆ, ಅ. ೨೫: ಇಲ್ಲಿನ ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಬಿ.ವಿ. ರಮಣ ರವರ ಹುಟ್ಟುಹಬ್ಬದ ಪ್ರಯುಕ್ತ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿ ಸಿದ್ದ ಸಾಯಿ ಶಂಕರ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ನಾರಾಯಣರವರು ಮಾತನಾಡಿ, ಬಿ.ವಿ. ರಮಣರವರ ೯೮ ವರ್ಷದ ಸಾರ್ಥಕ ಜೀವನದ ವಿವಿಧ ಮಜಲುಗಳನ್ನು ವರ್ಣಿಸಿ ಅವರ ಶಿಸ್ತಿನ, ಪಾರದರ್ಶಕ ವ್ಯಕ್ತಿತ್ವ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಆಡಳಿತ ಮಂಡಳಿಯ ಕೋಶಾಧಿಕಾರಿ ವಾಸಂತಿ ಕೆ. ಹಾಗೂ ಪ್ರಾಂಶುಪಾಲರಾದ ಡಾ. ವಾಣಿ ಎಂ. ರಮಣ ಅವರೊಂದಿಗಿನ ಒಡನಾಟ ಹಾಗೂ ಅವರ ಉದಾತ್ತ ಜೀವನವನ್ನು ಮೆಲುಕು ಹಾಕಿದರು.
ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್ನ ಛೇರ್ ಪರ್ಸನ್ ಆಗಿರುವ ರಮಣ ಅವರ ಪುತ್ರಿ ಶಶಿಕಲಾ ಬಿ.ವಿ. ಅವರು ಬಿ.ವಿ. ರಮಣರವರ ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆ ಗಳನ್ನು ವಿವರಿಸಿದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯವು ೨೦೨೦-೨೧ ರಲ್ಲಿ ನಡೆಸಿದ ಬಿ.ಇಡಿ. ಅಂತಿಮ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ತೇಜಸ್ವಿ ಹಾಗೂ ೨೦೨೧-೨೨ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಲವಿನಾ ಅವರನ್ನು ಸನ್ಮಾನಿಸ ಲಾಯಿತು. ವಿದ್ಯಾರ್ಥಿನಿಯರಾದ ಶ್ರೀರಕ್ಷಾ ಪ್ರಾರ್ಥಿಸಿ ಹರ್ಷಿತ ಸ್ವಾಗತಿಸಿ, ಪೂಜಾ ಸಿ.ಕೆ. ವಂದಿಸಿದರು. ಗಾಂಧಿ ಜಯಂತಿ ಪ್ರಯುಕ್ತ ನಡೆದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.