ಗೋಣಿಕೊಪ್ಪಲು, ಅ. ೨೫: ಕಳೆದ ೧ ತಿಂಗಳ ಹಿಂದೆ ಬಾಳೆಲೆ ಹೋಬಳಿಯ ನಿಟ್ಟೂರು ಕಾರ್ಮಾಡು ವ್ಯಾಪ್ತಿಯ ಶ್ರೀ ಕಾಲಬೈರವ ದೇವಸ್ಥಾನದ ಆವರಣದಲ್ಲಿ ಅಳವಡಿಸಲಾದ ೫೦ ಸಾವಿರ ಮೌಲ್ಯದ ೪ ಗಂಟೆಗಳನ್ನು ಕಳ್ಳರು ಕದ್ದೊಯ್ದ ಪ್ರಕರಣ ಮಾಸುವ ಮುನ್ನವೆ, ಇದೇ ಹೋಬಳಿಯ ಪೊನ್ನಪ್ಪಸಂತೆಯ ಗ್ರಾಮ ಪಂಚಾಯಿತಿಯ ಬಿಳೂರು ಗ್ರಾಮದ ಇತಿಹಾಸ ಪ್ರಸಿದ್ದ ಈಶ್ವರ ಕಲ್ಲುಗುಡ್ಡೇಶ್ವರ, ಬೆಸಗೂರಿನ ಮಹಾದೇವ ಹಾಗೂ ದುರ್ಗಿ ದೇವಾಲಯದಲ್ಲಿ ಅಳವಡಿಸಲಾಗಿದ್ದ ಪುರಾತನ ಕಾಲದ ಗಂಟೆಗಳನ್ನು ಕಳ್ಳರು ಅಪಹರಿಸಿದ್ದಾರೆ.
ಇದರಿಂದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು ಪೊಲೀಸರು ಕಳ್ಳರನ್ನು ಕೂಡಲೇ ಬಂಧಿಸುವAತೆ ಹಾಗೂ ಇನ್ನು ಮುಂದೆ ಕೊಡಗಿನ ಯಾವುದೇ ಭಾಗದ ದೇವಾಯಗಳಲ್ಲಿ ಕಳ್ಳತನ ನಡೆಯದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದೇವಾಲಯದ ಅರ್ಚಕರು ಎಂದಿನAತೆ ಮುಂಜಾನೆ ದೇವಾಲಯದ ಆವರಣಕ್ಕೆ ಆಗಮಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು,ಪದಾಧಿಕಾರಿಗಳು ಗ್ರಾಮ ಪಂಚಾಯಿತಿಯ ಸದಸ್ಯರು ಸ್ಥಳೀಯ ಗ್ರಾಮಸ್ಥರು ದೇವಾಲಯಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ನಂತರ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದರು. ದೂರು ದಾಖಲಿಸಿಕೊಂಡ ಪೊನ್ನಂಪೇಟೆ ಪೊಲೀಸರು ಕಳ್ಳನ ಪತ್ತೆಗಾಗಿ ಮಡಿಕೇರಿಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಹಲವು ಪ್ರಕರಣಗಳನ್ನು ಭೇದಿಸಿರುವ ಬ್ರೋನೊ ಶ್ವಾನವು ಈಶ್ವರ ದೇವಾಲಯದ ಸುತ್ತಲಿನ ಪ್ರದೇಶಕ್ಕೆ ತೆರಳಿ, ರಸ್ತೆಯವರಗೂ ಸಂಚರಿಸಿ ವಾಪಸ್ಸಾಗಿದೆ. ಬೆರಳಚ್ಚು ತಜ್ಞರಿಂದ ಹಲವು ಮಾಹಿತಿಗಳು ದೊರಕಿದ್ದು ಕಳ್ಳರ ಜಾಡಿನ ಸೂಕ್ಷö್ಮತೆಯ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು.
ದ. ಕೊಡಗು ಸೇರಿದಂತೆ ಜಿಲ್ಲೆಯ ಹಲವೆಡೆ ನಿರಂತರ ದೇವಸ್ಥಾನ ಗಳಲ್ಲಿರುವ ಗಂಟೆಯ ಮೇಲೆ ಕಣ್ಣಿಟ್ಟಿರುವ ಕಳ್ಳರು ಬೆಲೆ ಬಾಳುವ ಗಂಟೆಗಳನ್ನು ಯಾರಿಗೂ ಅರಿವಾಗದಂತೆ ಲಪಟಾಯಿಸುತ್ತಿದ್ದಾರೆ. ಸಿಸಿ ಕ್ಯಾಮೆರಾಗಳು ಇಲ್ಲದಿರುವ ದೇವಾಲಯಗಳನ್ನು ಗುರಿ ಮಾಡುತ್ತಿದ್ದಾರೆ.
ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಲೆ, ಗೋಣಿಕೊಪ್ಪ ಮುಖ್ಯ ರಸ್ತೆಯ ಅನತಿ ದೂರದ ಬಿಳೂರು ಗ್ರಾಮದಲ್ಲಿ ಹಲವು ಶತಮಾನಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಪೂಜಾ ಕೈಂಕರ್ಯಗಳು ಎಂದಿನAತೆ ನಡೆಯುತ್ತಿದ್ದವು. ಈ ದೇವಾಲಯದ ದೊಡ್ಡದಾದ ಹತ್ತಕ್ಕೂ ಅಧಿಕ ಗಂಟೆಗಳನ್ನು ಕಳ್ಳರು ಕಳ್ಳತನ ನಡೆಸಿ ನಂತರ ಪೊನ್ನಪ್ಪಸಂತೆ - ಪೊನ್ನಂಪೇಟೆ ಮಾರ್ಗದ ಬೆಸಗೂರು ರಸ್ತೆಯ ಬಳಿ ತೆರಳಿ ಸುಮಾರು ೨ ಕಿ.ಮೀ.ದೂರದ ಮಹಾದೇವರ ಹಾಗೂ ದುರ್ಗಿ ದೇವಿಯ ದೇವಾಲಯಗಳಿಗೆ ತೆರಳಿ ದೇವಾಲಯದ ಸುತ್ತಲೂ ಹಾಗೂ ಮುಂಭಾಗದಲ್ಲಿ ಕಟ್ಟಲಾಗಿದ್ದ ಗÀಂಟೆಗಳನ್ನು ಆಯುಧಗಳಿಂದ ತುಂಡರಿಸಿ ಸಾಗಿಸಿದ್ದಾರೆ. ಮಹಾದೇವರ ದೇವಾಲಯದಲ್ಲಿ ೨೧ ಗಂಟೆಗಳನ್ನು ಹಾಗೂ ದುರ್ಗಿ ದೇವಾಲಯದಲ್ಲಿ ೧೦ಕ್ಕೂ ಅಧಿಕ ಗಂಟೆಗಳನ್ನು ಅಪಹರಿಸಿದ್ದಾರೆ. ಈ ದೇವಾಲಯಗಳು ಗ್ರಾಮದ ನಿರ್ಜನ ಪ್ರದೇಶದಲ್ಲಿ ಇರುವುದನ್ನು ಮನಗಂಡ ಕಳ್ಳರು ಯಾವುದೇ ಭಯವಿಲ್ಲದೆ ಕಳ್ಳತನ ನಡೆಸಿ ಕೈಗೆ ಸಿಕ್ಕಿದ ವಸ್ತುಗಳನ್ನು ಹಾಗೂ ದುರ್ಗಿ ಹಾಗೂ ಮಹಾದೇವರ ದೇವಾಲಯದ ಮುಂದಿಟ್ಟಿದ್ದ ದೊಡ್ಡದಾದ ೫ ದೀಪ ಕಂಬಗಳನ್ನು ಕಳ್ಳತನ ನಡೆಸಿದ್ದಾರೆ.
ಬಿಳೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಆದೇಂಗಡ ವಿನು ಚಂಗಪ್ಪ ಹಾಗೂ ಈಶ್ವರ ದೇವಾಲಯದ ಅಧ್ಯಕ್ಷ ಆದೇಂಗಡ ಪ್ರದೀಪ್ ಗ್ರಾಮದಲ್ಲಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಹೊರ ಜಿಲ್ಲೆ ಅಥವಾ ಹೊರರಾಜ್ಯದ ಕಳ್ಳರು ಇಂತಹ ದುಷ್ಕೃತ್ಯ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಲವೆಡೆ ಕಳ್ಳತನ ಪ್ರಕರಣಗಳು ಮರುಕಳುಹಿಸುತ್ತಿರುವುದರಿಂದ ಕೂಡಲೇ ಪೊಲೀಸರು ಕಳ್ಳರನ್ನು ಬಂಧಿಸಲು ಆಗ್ರಹಿಸಿದ್ದಾರೆ.
ಮಹಾದೇವರ ದೇವಸ್ಥಾನದ ಅಧ್ಯಕ್ಷ ಬಾಚಮಾಡ ಪ್ರಕಾಶ್ ಹಾಗೂ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿಯ ಸದಸ್ಯ ಚೆಟ್ಟಿಮಾಡ ರಾಬಿನ್ ಬೋಪಣ್ಣ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಚಿತ್ರ, ವರದಿ: ಹೆಚ್.ಕೆ.ಜಗದೀಶ್