ಸೋಮವಾರಪೇಟೆ, ಅ.೨೩: ಪ್ರತಿ ದಿನ ಕೆಲಸದ ಜಂಜಾಟದಲ್ಲಿರುವ ಆಟೋ ಚಾಲಕರು ಇಂದು ತಮ್ಮೆಲ್ಲಾ ಒತ್ತಡಗಳನ್ನು ಬದಿಗಿಟ್ಟು ಮೈದಾನದಲ್ಲಿ ಮೈಕೊಡವಿ ಕ್ರೀಡಾ ಸ್ಫೂರ್ತಿಯೊಂದಿಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.

ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಂಘದ ಸದಸ್ಯರಿಗೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.

ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸದಸ್ಯರು ತಮ್ಮ ಆಟದ ಚಾಕಚಕ್ಯತೆ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಕಬಡ್ಡಿ ‘ರೈಡಿಂಗ್ ಹಾಗೂ ಕ್ಯಾಚ್’ನಲ್ಲಿ ಅತ್ಯುತ್ಸಾಹದೊಂದಿಗೆ ಭಾಗಿಯಾಗಿದ್ದರು. ಉತ್ತಮ ರೈಡ್‌ಗಳಾದಾಗ ಪ್ರೇಕ್ಷಕರ ಸಾಲಿನಲ್ಲಿದ್ದ ಆಟೋ ಚಾಲಕರು ತಪ್ಪಾಳೆ, ಶಿಳ್ಳೆ ಹೊಡೆದು ಆಟಗಾರರನ್ನು ಹುರಿದುಂಬಿಸಿದರು.ಇದರೊAದಿಗೆ ಬಾಂಬ್ ಇನ್ ದ ಸಿಟಿ, ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಕ್ರೀಡೆಯಲ್ಲೂ ಆಟೋ ಚಾಲಕರು ಉತ್ಸಾಹದಿಂದ ಭಾಗಿಯಾಗಿ ಬಾಡಿಗೆಯ ಜಂಜಾಟ ಮರೆತು ದಿನ ಕಳೆದರು.

ಇದಕ್ಕೂ ಮುನ್ನ ನಡೆದ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ. ಕನ್ನಡ ಭಾಷೆ ಉಳಿವಿನಲ್ಲಿ ಆಟೋ ಚಾಲಕರ ಪಾತ್ರ ಮಹತ್ತರವಾದುದು ಎಂದರು.

ಪ್ರತಿದಿನ ಒತ್ತಡದಲ್ಲಿಯೇ ಜೀವನ ನಡೆಸುವ ಆಟೋ ಚಾಲಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿದ್ದಾರೆ. ಇಂತಹ ವೇದಿಕೆಗೆ ಮುನ್ನುಡಿ ಬರೆದ ಸಂಘದ ಕಾರ್ಯ ಪ್ರಶಂಸನೀಯ ಎಂದರು.

ಆಟೋ ಚಾಲನೆ ಸಂದರ್ಭ ಚಾಲಕರು ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು. ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ನುಡಿದರು. ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಆಟೋ ಚಾಲಕರು ಸಂಕಷ್ಟದ ಸ್ಥಿತಿಯಲ್ಲಿದ್ದು, ಹಲವಷ್ಟು ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಇವರುಗಳ ನೆರವಿಗೆ ಸರ್ಕಾರ ಮುಂದಾಗಬೇಕು ಎಂದರು.

ಆಟೋ ಚಾಲಕರ ಸಂಘದ ಕನ್ನಡ ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ಮಾಜಿ ಅಧ್ಯಕ್ಷರಾದ ಆರ್. ಮೋಹನ್ ಸಿ.ಡಿ. ನೆಹರು ಅವರುಗಳು ಈ ಸಂದರ್ಭ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜನಾರ್ದನ್, ಉಪಾಧ್ಯಕ್ಷ ಕರೀಂ, ಸಹ ಕಾರ್ಯದರ್ಶಿ ಪಿ.ಎನ್. ರಮೇಶ್, ಕೆ.ವಿ. ಪ್ರಭಾಕರ್, ಖಜಾಂಚಿ ಸುದೀಪ್ ಆಲ್ಬರ್ಟ್ ಉಪಸ್ಥಿತರಿದ್ದರು.