ಪಾಕ್ ವಿರುದ್ಧ ಭಾರತಕ್ಕೆ ಗೆಲುವು

ಮೆಲ್ಬೋರ್ನ್, ಅ. ೨೩: ಟಿ-೨೦ ವಿಶ್ವಕಪ್ ೨೦೨೨ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದೆ. ಮೆಲ್ಬೋರ್ನ್ನಲ್ಲಿ ನಡೆದ ಗ್ರೂಪ್ ೨ ಹಂತದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ ಓವರ್‌ನಲ್ಲಿ ೮ ವಿಕೆಟ್ ನಷ್ಟಕ್ಕೆ ೧೫೯ ರನ್ ಬಾರಿಸಿತ್ತು. ಆರಂಭಿಕ ಆಘಾತ ಎದುರಿಸಿದ ಪಾಕಿಸ್ತಾನಕ್ಕೆ ಶಾನ್ ಮಸೂದ್ ಅಜೇಯ ೫೨ ರನ್ ಹಾಗೂ ಇಫ್ತಿಕರ್ ಅಹ್ಮದ್ ೫೧ ರನ್ ಬಾರಿ ತಂಡಕ್ಕೆ ಸ್ಪಲ್ಪ ಚೇತರಿಕೆ ತಂದುಕೊಟ್ಟಿದ್ದು ಪಾಕ್ ಭಾರತಕ್ಕೆ ಗೆಲ್ಲಲು ೧೬೦ ರನ್‌ಗಳ ಗುರಿ ನೀಡಿತು. ೧೬೦ ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಅಜೇಯ ೮೨ ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕರಾದ ಕೆ.ಎಲ್. ರಾಹುಲ್ ೪ ಮತ್ತು ರೋಹಿತ್ ಶರ್ಮಾ ೪ ರನ್‌ಗಳಿಗೆ ಔಟಾಗುವ ಮೂಲಕ ತಂಡಕ್ಕೆ ಆಘಾತ ನೀಡಿದರು. ಈ ವೇಳೆ ತಾಳ್ಮೆಯ ಆಟವಾಡಿದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ೪೦ ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಾಜೀವ್ ಗಾಂಧಿ ಪ್ರತಿಷ್ಠಾನದ ಲೈಸೆನ್ಸ್ ರದ್ದು

ನವದೆಹಲಿ, ಅ. ೨೩: ವಿದೇಶಗಳಿಂದ ದೇಣಿಗೆ ಸಂಗ್ರಹಿಸುವ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜೀವ್ ಗಾಂಧಿ ಫೌಂಡೇಶನ್ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೀಡಿದ್ದ ಲೈಸೆನ್ಸ್ ಅನ್ನು ಕೇಂದ್ರ ಗೃಹ ಇಲಾಖೆಯು ರದ್ದುಪಡಿಸಿದೆ. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಪ್ರಭಾವಿ ಮನೆತನವಾಗಿರುವ ಗಾಂಧಿ ಕುಟುಂಬದೊAದಿಗೆ ಈ ಪ್ರತಿಷ್ಠಾನವು ನಿಕಟ ಸಂಬAಧ ಹೊಂದಿದೆ. ಜುಲೈ ೨೦೨೦ರಲ್ಲಿ ಕೇಂದ್ರ ಗೃಹ ಇಲಾಖೆಯು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ವರದಿಯನ್ನು ಆಧರಿಸಿ ಪ್ರತಿಷ್ಠಾನಕ್ಕೆ ನೀಡಿದ್ದ ಲೈಸೆನ್ಸ್ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಲೈಸೆನ್ಸ್ ರದ್ದತಿ ಕುರಿತ ಮಾಹಿತಿಯನ್ನು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಳುಹಿಸಿಕೊಡಲಾಗಿದೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಟ್ರಸ್ಟ್ನ ವಿಶ್ವಸ್ಥರಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ. ಚಿದಂಬರA ಮತ್ತು ಸಂಸದರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇದ್ದಾರೆ.

ಕಳ್ಳತನ ಮಾಡಲು ಬಂದಿದ್ದ ಮನೆಯಲ್ಲಿಯೇ ಖದೀಮ ಆತ್ಮಹತ್ಯೆ

ಬೆಂಗಳೂರು, ಅ. ೨೩: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ ಅದೇ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಪ್ರಕರಣ ಬೆಂಗಳೂರಿನ ಇಂದಿರಾನಗರದಿAದ ವರದಿಯಾಗಿದೆ. ಕಳ್ಳತನ ಮಾಡಲು ಬಂದಿದ್ದ ಈ ವ್ಯಕ್ತಿ ದೇವರ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮನೆಯವರು ಪ್ರವಾಸ ಹೋಗಿದ್ದರಿಂದ ಯಾರೂ ಇರಲಿಲ್ಲ. ಯುರೋಪ್ ಪ್ರವಾಸಕ್ಕೆ ತೆರಳಿದ್ದ ಮನೆಯವರು ಮನೆಗೆ ವಾಪಸಾಗಿದ್ದರು. ಈ ವೇಳೆ ಮನೆಯ ಒಳಗೆ ವ್ಯಕ್ತಿ ಇರುವ ಬಗ್ಗೆ ಗುಮಾನಿ ಮೂಡಿದ್ದು, ದೇವರ ಮನೆ ಕಿಟಕಿ ತೆರೆದು ನೋಡಿದಾಗ ವ್ಯಕ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯವರು ಕೂಡಲೇ ಇಂದಿರಾನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿ ದಿಲೀಪ್ ಕುಮಾರ್ ಎಂಬುದು ಪತ್ತೆಯಾಗಿದೆ. ಅಸ್ಸಾಂ ಮೂಲದ ಮೃತ ದಿಲೀಪ್ ಕುಮಾರ್ ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದಾನೆ. ಈ ಹಿಂದೆ ೨೦೦೬ರಲ್ಲಿ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಜೆಬಿ ನಗರ ಪೊಲೀಸರು ಬಂಧಿಸಿದ್ದರು. ತಾನು ಸಿಕ್ಕಿಬೀಳುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತ ಕದಿಯಲು ಬಂದಿದ್ದರೆ ಬುಧವಾರ ತಡರಾತ್ರಿಯೇ ತೆರಳುತ್ತಿದ್ದ. ಮನೆಯಲ್ಲೇ ಇದ್ದು, ಪೂಜಾ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಚೀನಾ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್

ಬೀಜಿAಗ್, ಅ. ೨೩: ಚೀನಾ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್ ಸತತ ೩ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಭಾನುವಾರ ನಡೆದ ಈ ಐತಿಹಾಸಿಕ ಬೆಳವಣಿಗೆಯ ನಂತರ ಮಾತನಾಡಿದ ಅವರು, ‘ಜಗತ್ತಿಗೆ ಈಗ ಚೀನಾದ ಅಗತ್ಯವಿದೆ’ ಎಂದು ಘೋಷಿಸಿದರು. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಈ ವಿಷಯವನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ (ಸಿಪಿಸಿ) ೨೦ನೇ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜಿನ್‌ಪಿಂಗ್ ಅವರನ್ನು ಸಮಿತಿಯ ಮೊದಲ ಸರ್ವಸದಸ್ಯ ಸಭೆಯಲ್ಲಿ ಚುನಾಯಿಸಲಾಯಿತು.

ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ

ಚಾಮರಾಜನಗರ, ಅ. ೨೩: ಸಚಿವ ವಿ. ಸೋಮಣ್ಣ ಅವರು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಶನಿವಾರ ಹಂಗಳ ಗ್ರಾಮದ ೧೭೫ ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು. ಮಧ್ಯಾಹ್ನ ೩.೩೦ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸಚಿವರು ಸಂಜೆ ೬.೩೦ಕ್ಕೆ ಆಗಮಿಸಿದರು. ಈ ವೇಳೆ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಯಿತು. ಇದೇ ವೇಳೆ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿ ತೆರಳಿದರು. ಸಮಸ್ಯೆ ಹೇಳಿಕೊಳ್ಳಲು ತೆರಳಿದ ಮಹಿಳೆಗೆ ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದರು. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನಂತರ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಆರೋಗ್ಯ ಕಾರ್ಯಕರ್ತೆಯ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ

ಕೊರ್ಬಾ, ಅ. ೨೩: ಛತ್ತೀಸ್‌ಗಢದ ಮನೇಂದ್ರಗಢ-ಚಿರ್ಮಿರಿ-ಭರತ್‌ಪುರ (ಎಂಸಿಬಿ) ಜಿಲ್ಲೆಯಲ್ಲಿ ೩೨ ವರ್ಷದ ಆರೋಗ್ಯ ಕಾರ್ಯಕರ್ತೆಯ ಮೇಲೆ ಅಪ್ರಾಪ್ತನೊಬ್ಬ ಆಸ್ಪತ್ರೆಯಲ್ಲಿಯೇ ಚಾಕು ತೋರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ೧೭ ವರ್ಷದ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಜಾಗ್ರಖಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿಪ್ಚಿಪ್ ಗ್ರಾಮ ಪಂಚಾಯಿತಿಯ ಉಪ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಈ ಸಂಬAಧ ಶನಿವಾರ ಬೆಳಿಗ್ಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ಕ್ರಮಕೈಗೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಮಹಿಳೆ ಒಬ್ಬಂಟಿಯಾಗಿದ್ದಳು. ಈ ವೇಳೆ ಅಪ್ರಾಪ್ತ ಮತ್ತು ಆತನ ಮೂವರು ಸಹಚರರು ಒಳಗೆ ನುಗ್ಗಿದ್ದಾರೆ. ನಂತರ ಚಾಕುವಿನಿಂದ ಬೆದರಿಸಿ ಆಕೆಯ ಕೈಕಾಲುಗಳನ್ನು ಕಟ್ಟಿದ್ದಾರೆ. ನಂತರ ಹುಡುಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆನಂದ್ ಮಾಮನಿ ವಿಧಿವಶ

ಬೆಂಗಳೂರು, ಅ. ೨೩ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ ಆನಂದ್ ಮಾಮನಿ (೫೬) ತೀವ್ರ ಅನಾರೋಗ್ಯದಿಂದ ಶನಿವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸವದತ್ತಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಮಾಮನಿ ಅವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ, ಇತ್ತೀಚೆಗಷ್ಟೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆಗೆ ಬರುತ್ತೇನೆ. ಯಾರು ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದರು. ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.