ವಿದ್ಯುತ್ ತಗುಲಿ ಇಬ್ಬರು ಫೋಟೋಗ್ರಾಫರ್‌ಗಳು ಸಾವು

ಮಂಡ್ಯ, ಅ. ೨೨: ತಮ್ಮ ಸ್ಟುಡಿಯೋದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ತಯಾರಿ ನಡೆಸುತ್ತಿದ್ದಾಗ ವಿದ್ಯುತ್ ತಗುಲಿ ಇಬ್ಬರು ಫೋಟೋಗ್ರಾಫರ್‌ಗಳು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಈ ಅವಘಡ ಸಂಭವಿಸಿದ್ದು, ಮೃತ ಫೋಟೋಗ್ರಾಫರ್ ಅನ್ನು ವಿವೇಕ್ (೪೫) ಮತ್ತು ಮಧುಸೂಧನ್ (೩೫) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ಟುಡಿಯೋ ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಡ ಸಾವು: ಕಂದಮ್ಮನ ಕೊಂದು ಪತ್ನಿ ನೇಣಿಗೆ ಶರಣು

ಬೆಳಗಾವಿ, ಅ. ೨೨: ಕ್ರಿಮಿನಾಶಕ ಸೇವಿಸಿದ ಗಂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಕ್ಕೆ ಮನನೊಂದ ಪತ್ನಿ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಂದು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ, ಪತ್ನಿ ಹಾಗೂ ಪುಟ್ಟ ಮಗು ಸಾವನ್ನಪ್ಪಿದ್ದಾರೆ. ಹೊಳೆಪ್ಪ ಮಾರುತಿ ಮಸ್ತಿ (೨೫), ಈತನ ಪತ್ನಿ ವಾಸಂತಿ (೨೨) ಹಾಗೂ ಒಂದೂವರೆ ವರ್ಷದ ಮಗು ಮೃತ ದುರ್ದೈವಿ.ಮದ್ಯದ ಅಮಲಿನಲ್ಲಿ ಹೊಳೆಪ್ಪ ಪತ್ನಿಯೊಂದಿಗೆ ಜಗಳವಾಡಿದ್ದನು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುವ ಉದ್ದೇಶದಿಂದ ವಿಷ ಕುಡಿದಿದ್ದನು. ತಕ್ಷಣ ಸ್ನೇಹಿತರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಇದರಿಂದ ಮನನೊಂದ ಪತ್ನಿ ವಾಸಂತಿ ಕೂಡ ತಮ್ಮ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಗೆ ಮೂರು ವರ್ಷದ ಮತ್ತೊಬ್ಬಳು ಪುತ್ರಿ ಇದ್ದು, ಆಟವಾಡಲು ಹೊರಗೆ ಹೋಗಿದ್ದರಿಂದ ಬದುಕುಳಿದಿದ್ದಾಳೆ. ಘಟನೆ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಅಜ್ಞಾನಿ ಆಡಳಿತಗಾರರಿಂದ ಕೇರಳಿಗರು ರಾಜ್ಯ ತೊರಿಯುತ್ತಿದ್ದಾರೆ: ಆರಿಫ್ ಖಾನ್

ಕೊಚ್ಚಿ, ಅ. ೨೨: ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಜ್ಞಾನಿಗಳು ರಾಜ್ಯವನ್ನು ಆಳುತ್ತಿರುವ ಕಾರಣದಿಂದ ಪ್ರತಿಭಾವಂತರು ರಾಜ್ಯವನ್ನು ತೊರೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೊಚ್ಚಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಕಾರ್ಯಗಳನ್ನು ಪರಿಶೀಲಿಸುವ ಸಾಂವಿಧಾನಿಕ ಹಕ್ಕು ನ್ಯಾಯಾಲಯಕ್ಕೆ ಮಾತ್ರ ಇದೆಯೇ ಹೊರತು ಮಂತ್ರಿಗಳಲ್ಲ ಎಂದು ರಾಜ್ಯಪಾಲರು, ವಿತ್ತ ಸಚಿವ ಕೆ.ಎನ್. ಬಾಲಗೋಪಾಲ್ ಮತ್ತು ಕಾನೂನು ಸಚಿವ ಪಿ. ರಾಜೀವ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇರಳದ ಬುದ್ಧಿವಂತ ಸಚಿವರೊಬ್ಬರು ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು (ಆರಿಫ್ ಖಾನ್) ಕೇರಳದ ಶೈಕ್ಷಣಿಕ ವ್ಯವಸ್ಥೆಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಮದ್ಯ ಮತ್ತು ಲಾಟರಿ ಆದಾಯದ ಮುಖ್ಯ ಮೂಲವಾಗಿರುವ ವಿತ್ತ ಸಚಿವರು, ರಾಜ್ಯಪಾಲರಿಗೆ ಕೇರಳದ ಶಿಕ್ಷಣ ವ್ಯವಸ್ಥೆ ಅರ್ಥವಾಗಬಹುದೇ ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಅವರು ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸುಪ್ರೀಂ ಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿಗಳ ಬಗ್ಗೆ ಇದೇ ರೀತಿಯ ಹೇಳಿಕೆ ನೀಡುವುದನ್ನು ತಪ್ಪಿಸಲು ನಾನು ಅವರಿಗೆ ಸಲಹೆ ನೀಡುತ್ತೇನೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಉದ್ಧವ್ ಬಣದ ಇನ್ನೂ ನಾಲ್ವರು ಶಾಸಕರು ಪಕ್ಷ ಬದಲಾಯಿಸಲಿದ್ದಾರೆ: ರಾಣೆ

ಪುಣೆ, ಅ. ೨೨: ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷಕ್ಕೆ ಸೇರಲು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಅವರು ಶನಿವಾರ ಹೇಳಿದ್ದಾರೆ. ಆದರೆ ಆ ನಾಲ್ವರು ಶಾಸಕರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರದ 'ರೋಜ್‌ಗಾರ್ ಮೇಳ'ದ ಭಾಗವಾಗಿ ಇಂದು ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, "ಶಿವಸೇನೆಯ ೫೬ ಶಾಸಕರ ಪೈಕಿ ಆರರಿಂದ ಏಳು ಶಾಸಕರು ಮಾತ್ರ (ಉದ್ಧವ್ ಠಾಕ್ರೆ ಬಣದಲ್ಲಿ) ಅಲ್ಲಿ ಉಳಿದಿದ್ದಾರೆ. ಅವರೂ ಹೊರಬರುವ ಹಾದಿಯಲ್ಲಿದ್ದಾರೆ. ನಾಲ್ವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಆದರೆ ನಾನು ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ" ಎಂದಿದ್ದಾರೆ. ಇದೇ ವೇಳೆ ಉದ್ಧ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, ಮಾಜಿ ಸಿಎಂ ರಾಜಕೀಯವು ಮಾತೋಶ್ರೀಗೆ ಸೀಮಿತವಾಗಿದೆ(ಮುಂಬೈನ ಬಾಂದ್ರಾದಲ್ಲಿರುವ ಠಾಕ್ರೆಯ ಖಾಸಗಿ ನಿವಾಸ ಮತ್ತು ಸೇನಾ ಭವನ, ಪಕ್ಷದ ಶಕ್ತಿ ಕೇಂದ್ರ). 'ಈಗ ಸೇನೆಯ ಯಾವುದೇ ಬಣ ಉಳಿದಿಲ್ಲ' ಎಂದು ಹೇಳಿದರು.

ಯುವತಿಯಿಂದ ಮಾದಕ ನೃತ್ಯ, ಶಿಕ್ಷಣ ಸಂಸ್ಥೆಗೆ ನೋಟೀಸ್

ಪೇಶಾವರ, ಅ. ೨೨: ನೃತ್ಯ ಕಾರ್ಯಕ್ರಮವೊಂದರಲ್ಲಿ ಯುವತಿಯೋರ್ವಳು ಮಾದಕ ನೃತ್ಯ ಮಾಡಿದ್ದು ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲೇಜಿನಲ್ಲಿ ಮಾದಕ ನೃತ್ಯ ಹಿನ್ನೆಲೆಯಲ್ಲಿ ಪೇಶಾವರದ ಎನ್‌ಸಿಎಸ್ ವಿಶ್ವವಿದ್ಯಾಲಯಕ್ಕೆ ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯವು ನೋಟೀಸ್ ನೀಡಿದೆ. ೨೩ ಸೆಕೆಂಡುಗಳ ವೀಡಿಯೋದಲ್ಲಿ, ಯುವತಿಯೋರ್ವಳು ಮಾದಕ ಬಟ್ಟೆ ಧರಿಸಿ ವೇದಿಕೆ ಮೇಲೆ ಹಾಡುತ್ತಾ ನೃತ್ಯ ಮಾಡುವುದನ್ನು ಕಾಣಬಹುದು. ಈ ವೀಡಿಯೋ ವೈರಲ್ ಆಗಿದ್ದು ಇದಕ್ಕೆ ಟೀಕೆಗಳು ವ್ಯಕ್ತವಾಗಿದೆ. ಇನ್ನು ದೇಶದಲ್ಲಿ ಇಂತಹ ಘಟನೆಗಳ ಅಗತ್ಯತೆಯ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯ ಪೇಶಾವರದ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಇಂತಹ ಅನೈತಿಕ' ಚಟುವಟಿಕೆಗಳ ಬಗ್ಗೆ ಗಂಭೀರವಾಗಿ ಗಮನಹರಿಸಿದ್ದಾರೆ. ವೇದಿಕೆಯಲ್ಲಿ ಕೆಎಂಯುನ ಲಾಂಛನ ಮತ್ತು ಹೆಸರಿನೊಂದಿಗೆ ಇಂತಹ ಚಟುವಟಿಕೆಗಳನ್ನು ನಡೆಸುವುದು ಸಾಕಷ್ಟು ಆಕ್ಷೇಪಾರ್ಹವಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಎಲ್ಲಾ ಪಠ್ಯಕ್ರಮ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ನೈತಿಕ ಮತ್ತು ನೈತಿಕ ಮಾನದಂಡಗಳನ್ನು ಮತ್ತು ಸಂಸ್ಥೆಯ ಪಾವಿತ್ರ‍್ಯತೆಯನ್ನು ಕಾಪಾಡಿಕೊಳ್ಳಲು ಬದ್ಧರಾಗಿರಿ ಎಂದು ರಿಜಿಸ್ಟ್ರಾರ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ನಿರ್ದೇಶಿಸಲಾಗಿದೆ. ಇಲ್ಲದಿದ್ದರೆ ಸಂಸ್ಥೆಯ ವಿರುದ್ಧ ಶಿಸ್ತಿನ ಕ್ರಮವನ್ನು ಜರುಗಿಸಲಾಗುವುದು. ಇದು ಸಂಸ್ಥೆಯ ಸಂಬAಧವನ್ನು ರದ್ದುಗೊಳಿಸಬಹುದು" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.