ಕೂಡಿಗೆ, ಅ. ೨೩: ಕುಶಾಲನಗರ ಇಂಜಿನಿಯರ್ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಇದೇ ಪ್ರಥಮವಾಗಿ ಅಭಿವೃದ್ಧಿ ಸಮಿತಿಯು ರಚನೆಗೊಂಡಿದ್ದು, ಸಭೆಯಲ್ಲಿ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಮತ್ತು ಕಾಲೇಜು ಆವರಣಕ್ಕೆ ಸಂಪೂರ್ಣವಾದ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮುಂದುವರಿಸುವ ವಿಷಯಗಳ ಬಗ್ಗೆ ಪ್ರಸ್ತಾವನೆ, ನಂತರ ಬೃಹತ್ ಪ್ರಮಾಣದ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಸೇರಿದಂತೆ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾದ ಅಂಶಗಳ ಬಗ್ಗೆ ಸಂಬAಧಿಸಿದ ವಿಷಯಗಳ ಪ್ರಾಧ್ಯಾಪಕರಿಂದ ಶಾಸಕರು ಮಾಹಿತಿಯನ್ನು ಪಡೆದು ಚರ್ಚಿಸಿದರು.

ಸಭೆಯಲ್ಲಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಶೀನಪ್ಪ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಿವೃತ್ತ ಪ್ರಾಂಶುಪಾಲ ಶಿವಪ್ಪ, ಸಮಿತಿ ಸದಸ್ಯರಾದ ಕೆಂಚಪ್ಪ, ಎಂ.ಆರ್. ಉತ್ತಪ್ಪ, ರಾಮಶೆಟ್ಟಿ, ದಾಸಂಡ ರಮೇಶ್, ಸ್ಥಳೀಯ ಕೈಗಾರಿಕೋದ್ಯಮಿ ಜೆಮ್ಸಿ ಪೊನ್ನಪ್ಪ, ಬಾಲಾಜಿ, ವಿ.ಕೆ. ಲೋಕೇಶ್, ಹೆಚ್.ಈ. ದರ್ಶನ್, ಬಾಸ್ಕರ್ ನಾಯಕ್, ಮಹಿಳಾ ಪ್ರತಿನಿಧಿ ಮಂಜುಳ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪೀಟರ್, ಸೇರಿದಂತೆ ಇನ್ನಿತರರು ಹಾಜರಿದ್ದರು.