ಮಡಿಕೇರಿ, ಅ. ೨೨: ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದುವರೆದು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಮೂಲ ಆದಿವಾಸಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಈ ನೀತಿಯನ್ನು ರದ್ದುಗೊಳಿಸಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಒಳಮೀಸಲಾತಿ ನಿಗದಿಪಡಿಸುವಂತೆ ಸೋಮವಾರ ಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಜೆ.ಎ. ಶಿವು, ಅರಣ್ಯ ಮೂಲ ಆದಿವಾಸಿಗಳಿಗೆ ಶೇ. ೪ ಒಳಮೀಸಲಾತಿ ನಿಗದಿಪಡಿಸುವುದರ ಜೊತೆಗೆ ೨೦೦೬ರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ ಅವರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ೫೦ ವಿವಿಧ ರೀತಿಯ ಜನಾಂಗಗಳಿಗೆ ಎಸ್ಟಿ ಮೀಸಲಾತಿಯನ್ನು ಶೇ. ೩ ರಿಂದ. ೭ಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹ. ಆದರೆ, ಆರ್ಥಿಕ, ಸಾಮಾಜಿಕವಾಗಿ ಮುಂದುವರೆದು ಬೇಡಿಕೆ ಇಟ್ಟು ಅನುಸೂಚಿತ ಬುಡಕಟ್ಟು ಸ್ಥಾನಮಾನ ಪಡೆದವರಿಂದ ಆದಿವಾಸಿ ಸಮುದಾಯಗಳು ರಾಜಕೀಯ, ಸಾಮಾಜಿಕ, ಯೋಜನೆಗಳಿಂದ ಅವಕಾಶ ವಂಚಿತವಾಗುತ್ತವೆ. ಅಲ್ಲದೆ ಎಸ್.ಟಿ. ಪಟ್ಟಿಯಲ್ಲಿ ಕೆಲ ಗೊಂದಲಗಳಿರುವ ಕಾರಣ ಮೀಸಲಾತಿ ಆದೇಶ ರದ್ದುಗೊಳಿಸಿ ವೈಜ್ಞಾನಿಕ ಮಾನವಶಾಸ್ತç ಅನ್ವಯ ಅವರ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಾಂಸ್ಕೃತಿಕ ಮೌಲ್ಯ ಆಧರಿಸಿ ಅಧ್ಯಯನ ನಡೆಸಿ ಮೂಲ ಆದಿವಾಸಿಗಳ ಮುಂದೆ ಮಂಡಿಸಿ ಘೋಷಿಸುವಂತೆ ಬೇಡಿಕೆ ಇಟ್ಟರು.

ಕಾಡಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಗಳು ಇನ್ನೂ ಸಮಸ್ಯೆಗಳ ನಡುವೆ ಬದುಕುತ್ತಿವೆ. ಅರಣ್ಯ ಇಲಾಖೆಯ ಕಿರುಕುಳದ ಮೂಲಕ ಒಕ್ಕಲೆಬ್ಬಿಸುವ ಯತ್ನ ನಡೆಯುತ್ತಿದೆ. ಇದರಿಂದ ಕಾನೂನಿನ ಮೇಲಿನ ನಂಬಿಕೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಶಿವು, ಅರಣ್ಯ ಹಕ್ಕು ಕಾನೂನನ್ನು ಜಾರಿಮಾಡುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ. ತಿಮ್ಮಯ್ಯ, ಬುಡಕಟ್ಟು ಕೃಷಿಕರ ಸಂಘದ ಪ್ರಮುಖರಾದ ವಿಶ್ವ, ಜೆ.ಎ. ಶ್ಯಾಂ ಹಾಜರಿದ್ದರು.