ಸೋಮವಾರಪೇಟೆ, ಅ. 21: ವೇತನ ವಿಳಂಬ, ಭವಿಷ್ಯ ನಿಧಿ ಮತ್ತು ಕಾರ್ಮಿಕರ ಆರೋಗ್ಯ ವಿಮೆಗೆ ಹಣ ಪಾವತಿಸದಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಡಯಾಲಿಸಿಸ್ ಘಟಕಗಳ ಸಿಬ್ಬಂದಿಗಳು ಸೇವೆ ಬಹಿಷ್ಕರಿಸಿ ಗುರುವಾರ ಮುಷ್ಕರ ನಡೆಸಿದಕ್ಕೆ ಜಿಲ್ಲೆಯ ಮೂರು ತಾಲೂಕಿನ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳು ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಡಯಾಲಿಸಿಸ್ ಮಾಡಿಸುತ್ತಿರುವ ರೋಗಿಗಳು ಪರದಾಡಿದರು.

ರಾಜ್ಯದ 120 ಡಯಾಲಿಸಿಸ್ ಕೇಂದ್ರದ 650ಕ್ಕೂ ಹೆಚ್ಚಿನ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಜೂನ್ ತಿಂಗಳಿನಲ್ಲಿಯೂ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಅಂದು ಆರೋಗ್ಯ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ ಸಹ ಯಾವುದೇ ಬೇಡಿಕೆ ಈಡೇರಿರಲಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮುಷ್ಕರ ಪ್ರಾರಂಭವಾಗಿದೆ.