ಸಿದ್ದಾಪುರ, ಅ. 21: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕುಂಬಾರಗುಂಡಿಯಲ್ಲಿ ಕಳೆದ ಆರು ತಿಂಗಳ ಹಿಂದೆ ನಿರ್ಮಾಣ ಮಾಡಿರುವ ಕಿರುಸೇತುವೆ ಬಿರುಕುಬಿಟ್ಟಿದ್ದು, ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಕಾರ್ಮಿಕ ಮುಖಂಡ ಪಿ.ಆರ್. ಭರತ್ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅವರು ಕುಂಬಾರ ಗುಂಡಿಯಲ್ಲಿ ನದಿ ತೀರದ ನಿವಾಸಿಗಳಿಗೆ ಅನುಕೂಲ ವಾಗುವ ರೀತಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಿರುಸೇತುವೆ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ. ಅಲ್ಲದೇ ಬಿರುಕುಬಿಟ್ಟು ಅಪಾಯದಲ್ಲಿದೆ ಎಂದರು. ಈ ಕಾಮಗಾರಿಯನ್ನು ಮಾಡಿಸಿದ ಗ್ರಾ.ಪಂ. ಹಾಗೂ ಕಳಪೆಯಾಗಿ ನಿರ್ಮಾಣ ಮಾಡಿರುವ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಸಿಪಿಐ(ಎಂ) ಪಕ್ಷದ ಪದಾಧಿಕಾರಿಗಳಾದ ಟಿ.ಟಿ. ಉದಯ ಕುಮಾರ್, ಮೊಣಪ್ಪ, ರವಿ ಹಾಜರಿದ್ದರು.