ಮಡಿಕೇರಿ, ಅ. ೨೨: ಯೋಗ ಮತ್ತು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಕುವೆಂಪು ನಗರದ ನಿವಾಸಿ ಕೃಷ್ಣ ನಾಯಕ್ ರವರು ಮೈಸೂರಿನಿಂದ ಕಾಶ್ಮೀರ ದವರೆಗೆ ಕಾಲ್ನಡಿಗೆ ಯಾತ್ರೆ ಪ್ರಾರಂಭಿಸಿದ್ದು, ಇವರು ಕೊಡಗಿಗೆ ಆಗಮಿಸಿದ ಸಂದರ್ಭ ಇವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್, ಜಿಲ್ಲಾ ವಿಶೇಷ ಆಹ್ವಾನಿತ ವಿ.ಟಿ. ಮಂಜುನಾಥ್ ಭೇಟಿಯಾಗಿ ಶುಭ ಕೋರಿದರು.

ಕೃಷ್ಣ ನಾಯಕ್ ಅವರು ತಾವು ಹೋಗುವ ದಾರಿ ಉದ್ದಕ್ಕೂ ಸೀಡ್ ಬಾಲ್‌ಗಳನ್ನು ಹಾಕುವ ಮೂಲಕ ಮತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ದಾರಿಯಲ್ಲಿ ಸಿಗುವ ಶಾಲೆಗಳಿಗೆ ಭೇಟಿಕೊಟ್ಟು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನು ಮತ್ತು ಪರಿಸರ ಸಂರಕ್ಷಣೆಯ ವಿಚಾರವಾಗಿ ಮಾತನಾಡಲಿದ್ದಾರೆ. ತಾ. ೧೬ ರಂದು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿಯಿಂದ ಕಾಲ್ನಡಿಗೆ ಪ್ರಯಾಣ ಆರಂಭಿಸಿದ್ದು, ತಾ. ೨೧ ರಂದು ಕೊಡಗು ಜಿಲ್ಲೆಗೆ ಆಗಮಿಸಿದ್ದರು.

ಇವರ ಈ ಪ್ರಯಾಣವನ್ನು ಹಿಂದೆ ಇವರು ಇದೇ ಉದ್ದೇಶದಿಂದ ಮೈಸೂರಿನಿಂದ ಕಾಶಿಯವರೆಗೆ ೨,೫೦೦ ಕಿಲೋಮೀಟರ್‌ಗಳ ಕಾಲ್ನಡಿಗೆ ಯಾತ್ರೆ ೫೬ ದಿನಗಳಲ್ಲಿ ಮುಗಿಸಿದ್ದರು.