ಮಡಿಕೇರಿ, ಅ. 21: ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಎಲ್ಲಾ ಹಂತದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಬಾರ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಕೋಟೆ ಆವರಣದಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ಏರ್ಪಡಿಸುವುದು, ಮೆರವಣಿಗೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಸ್ತಬ್ಧಚಿತ್ರವನ್ನು ಮಾಹಿತಿ ಶಿಕ್ಷಣ ಚಟುವಟಿಕೆಯಡಿ ನಿರ್ಮಿಸುವಂತೆ ಅವರು ಸೂಚಿಸಿದರು.
ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಾಹಾರ ವ್ಯವಸ್ಥೆ ಮಾಡುವುದು, ಸಾಂಸ್ಕøತಿಕ ಕಾರ್ಯಕ್ರಮ ಸಂಬಂಧಿಸಿದಂತೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು. ಎಂಜಿನಿಯರಿಂಗ್ ಇಲಾಖೆಗಳು ವೇದಿಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರು, ಕಳೆದ ಎರಡು ವರ್ಷದಿಂದ ಕೋವಿಡ್-19 ಹಿನ್ನೆಲೆ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿತ್ತು. ಈ ಬಾರಿ ವ್ಯವಸ್ಥಿತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಎಲ್ಲಾ ಹಂತದ ಇಲಾಖಾ ಅಧಿಕಾರಿಗಳು ತಮಗೆ ವಹಿಸಿರುವ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಅವರು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್ ಅವರು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಅವರು ಧ್ವಜಾರೋಹಣ ಮತ್ತಿತರ ಸಂಬಂಧ ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ. ಷೇಕ್, ನಗರಾಭಿವೃದ್ಧಿ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಪಾಷಾ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಪಿಎಂಜಿಎಸ್‍ವೈ ಇಂಜಿನಿಯರ್ ಪ್ರಭು, ಸೆಸ್ಕ್ ಎಇಇ ವಿನಯ ಕುಮಾರ್, ನಗರಸಭೆಯ ಪರಿಸರ ಇಂಜಿನಿಯರ್ ಸೌಮ್ಯ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಸಂಯೋಜನಾ ಅಧಿಕಾರಿ ದಮಯಂತಿ ಇತರರು ಹಲವು ಮಾಹಿತಿ ನೀಡಿದರು.