ಮಡಿಕೇರಿ, ಅ. ೨೦: ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾವೇರಿ ನದಿ ಉತ್ಸವ-೨೦೨೨ ತಾ. ೨೧ ರಂದು ನಡೆಯಲಿದೆ. ತಾ. ೨೧ ರಂದು ಬೆಳಿಗ್ಗೆ ೮.೩೦ ಗಂಟೆಗೆ ತಲಕಾವೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ತಲಕಾವೇರಿ ಕ್ಷೇತ್ರದಲ್ಲಿ ಗಣಪತಿ ಮತ್ತು ಈಶ್ವರ ಮಂದಿರದಲ್ಲಿ ಪೂಜೆ, ನಂತರ ಬ್ರಹ್ಮಕುಂಡಿಕೆ ಬಳಿ ಪೂಜೆ, ಗಣ್ಯರಿಂದ ಕಾವೇರಿ ನದಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಕಾವೇರಿ ನದಿ ಸಂರಕ್ಷಣೆ ಬಗ್ಗೆ ಪ್ರತಿಜ್ಞಾ ವಿಧಿ, ಕಾವೇರಿ ನದಿ ಸಂರಕ್ಷಣಾ ಕರಪತ್ರಗಳ ಬಿಡುಗಡೆ, ಗಣ್ಯರಿಂದ ಕಾವೇರಿ ಉತ್ಸವದ ಬಗ್ಗೆ ಸಂದೇಶ.
ಬಳಿಕ ಬೆಳಿಗ್ಗೆ ೧೧ ಗಂಟೆಗೆ ಭಾಗಮಂಡಲದಲ್ಲಿ ಕಾವೇರಿ ನದಿ ಉತ್ಸವದ ಕಾರ್ಯಕ್ರಮ ನಡೆಯಲಿದೆ. ಭಗಂಡೇಶ್ವರ ಕ್ಷೇತ್ರದಲ್ಲಿ ಪೂಜೆ, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಜೀವನದಿ ಕಾವೇರಿಗೆ ಮಹಾ ಆರತಿ ಬೆಳಗುವುದು ಮತ್ತು ಮಂತ್ರಘೋಷ ಹಾಗೂ ನಾಗರಿಕರಿಗೆ ನದಿ ಸಂರಕ್ಷಣೆ ಬಗ್ಗೆ ಪ್ರತಿಜ್ಞಾ ವಿಧಿ. ನಂತರ ಮಧ್ಯಾಹ್ನ ೩ ಗಂಟೆಗೆ ಕುಶಾಲನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಕಾವೇರಿ ನದಿ ಉತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ.