ಚಾಮರಾಜನಗರ, ಅ. ೨೦: ಕೃಷಿ ಪಂಪ್ ಸೆಟ್ ಕೇಬಲ್ ಕಳವಿಗೆ ಬಂದ ಈರ್ವರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಗ್ರಾಮದ ಜಮೀನೊಂದರ ಬಳಿ ಅನುಮಾಸ್ಪದವಾಗಿ ಮಾರುತಿ ಕಾರನ್ನು ನಿಲ್ಲಿಸಿಕೊಂಡಿದ್ದ ಈರ್ವರು ಗ್ರಾಮಸ್ಥರನ್ನು ಕಂಡೊಡನೆ ಕಾರನ್ನು ಬಿಟ್ಟು ಓಡಿ ಹೋಗಿದ್ದಾರೆ.

ಬುಧವಾರ ಬೆಳಿಗ್ಗೆ ಕಾರನ್ನು ತೆಗೆದುಕೊಂಡು ಹೋಗಲು ಬಂದಿದ್ದ ಈರ್ವರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ನಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ಜಿಲ್ಲೆಯ ಶನಿವಾರಸಂತೆ ಸಮೀಪದ ಕಿರುಬಿಳಹ ನಿವಾಸಿ ಸಂದೀಪ ಮತ್ತು ಮೂದರವಳ್ಳಿ ಗ್ರಾಮದ ಪ್ರದೀಪ ಎಂದು ಗುರುತಿಸಲಾಗಿದೆ. ಮುಕ್ಕಡಹಳ್ಳಿ ಗ್ರಾಮದ ನಾಗಣ್ಣ ಎಂಬುವರ ಜಮೀನಿನ ಬಳಿ ರಾತ್ರಿ ೧೧ ಗಂಟೆಯ ಸುಮಾರಿಗೆ ಪ್ರದೀಪ ಮತ್ತು ಸಂದೀಪ ಕಾರು ನಿಲ್ಲಿಸಿ ಬೋರ್‌ವೆಲ್‌ಗೆ ಸಂಪರ್ಕಿಸಿರುವ ವಿದ್ಯುತ್ ಕೇಬಲ್ ಇರುವ ಜಾಗದ ಹತ್ತಿರ ನಿಂತಿದ್ದರು ಎನ್ನಲಾಗಿದೆ. ಊರಿನವರು ಗುಂಪುಗೂಡಿದಾಗ ಕಾರು ಬಿಟ್ಟು ಇಬ್ಬರೂ ಪರಾರಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಚಾಮರಾಜನಗರ ಗ್ರಾಮಾಂತರ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಅವರು ಗ್ರಾಮಸ್ಥರು ಇಬ್ಬರೂ ವಿದ್ಯುತ್ ಕೇಬಲ್ ಕಳ್ಳತನ ಮಾಡಲು ಬಂದಿರುವ ಬಗ್ಗೆ ದೂರನ್ನು ನೀಡಿದ್ದು ಗ್ರಾಮಾಂತರ ಪೊಲೀಸರು ಐಪಿಸಿ ಸೆಕ್ಷನ್ ೩೭೯ ಹಾಗೂ ೫೧೧ ಅನ್ವಯ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಆದರೆ ಮತ್ತೊಂದು ಮೂಲದ ಪ್ರಕಾರ ಆರೋಪಿಗಳು ಹಂದಿ ಬೇಟೆಗೆ ತೆರಳಿದ್ದರೆಂದು ಹೇಳಲಾಗುತಿದ್ದು ಯಾವುದೇ ಆಯುಧ ಕಾರಿನಲ್ಲಿ ಪತ್ತೆ ಆಗಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- ಕೋವರ್‌ಕೊಲ್ಲಿ ಇಂದ್ರೇಶ್