ಚೆಟ್ಟಳ್ಳಿ, ಅ. ೨೦: ವೀರಾಜಪೇಟೆ ಸಮೀಪದ ಬೇತ್ರಿಯಲ್ಲಿ ತಾ. ೨೨ ಹಾಗೂ ೨೩ ರಂದು ಈದ್ ಮಿಲಾದ್, ಸ್ವಲಾತ್ ವಾರ್ಷಿಕೋತ್ಸವ ಹಾಗೂ ನೂತನ ಮದ್ರಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮುಹಿಯ್ಯದ್ದೀನ್ ಜುಮಾ ಮಸೀದಿ ಹಾಗೂ ಅರೆಬಿಕ್ ಮದ್ರಸ ಸಮಿತಿ ಬೇತ್ರಿ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನೂತನ ಮದ್ರಸ ಕಟ್ಟಡದ ಉದ್ಘಾಟನೆಯನ್ನು ಖುರ್ರತುಸ್ಸದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ನೆರವೇರಿಸಲಿದ್ದಾರೆ. ೧೦.೩೦ ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಶಾದುಲಿ ಫೈಝಿ ನಾಯಿಬ್ ಖಾಝಿ, ಅಬ್ದುಲ್ಲಾ ಫೈಝಿ ನಾಯಿಬ್ ಖಾಝಿ ಕೊಡಗು, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಶಾಫಿ ಸಹದಿ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಫಾ. ಐಸಾಕ್ ರತ್ನಾಕರ್ ಮತ್ತಿತರರು ಭಾಗವಹಿಸಲಿದ್ದಾರೆ.

ಶನಿವಾರ ಸಂಜೆ ೭ ಗಂಟೆಗೆ ಮತಪ್ರಭಾಷಣ ಹಾಗೂ ಸ್ವಲಾತ್ ಹಲ್ಕ ನಡೆಯಲಿದ್ದು, ಮತ ಪ್ರಭಾಷಣವನ್ನು ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ, ಮಲ್ಲಪ್ಪುರಂ ಇವರು ಮಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೇತ್ರಿ ಖತೀಬರಾದ ಬಷೀರ್ ಸಖಾಫಿ ನೆರವೇರಿಸಲಿದ್ದಾರೆ. ದಿಕ್ರ್ ಹಲ್ಕ ನೇತೃತ್ವವನ್ನು ಅಸ್ಸಯ್ಯದ್ ಫಝಲ್ ಸೀದಿ ಅಲ್ ಹೈದ್ರೊಸಿ, ಬಲಮುರಿ, ಇವರು ವಹಿಸಲಿದ್ದಾರೆ.

ಭಾನುವಾರ ಬೆಳಿಗ್ಗೆ ೮.೩೦ ಗಂಟೆಗೆ ಈದ್ ಮಿಲಾದ್ ಅಂಗವಾಗಿ ಮಿಲಾದ್ ಸಂದೇಶ ರ‍್ಯಾಲಿ ನಡೆಯಲಿದೆ. ನಂತರ ಬೆಳಿಗ್ಗೆ ೧೦ ಗಂಟೆಗೆ ಬೇತ್ರಿ ಮದರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬೇತ್ರಿ ಮುಹಿಯ್ಯದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ತಿಳಿಸಿದೆ.