ಜೀವನದಿ ಕಾವೇರಿ ಸೇರಿದಂತೆ ಭವಿಷ್ಯತ್ತಿಗಾಗಿ ನಾಡಿನ ನದಿಗಳ ಮಹತ್ವ, ಸಂರಕ್ಷಣೆ ಮತ್ತು ನಿರ್ವಹಣೆಯ ಕುರಿತು ನಾಗರಿಕ ಸಮಾಜದ ಪಾತ್ರ ಹಾಗೂ ಭಾಗವಹಿಸುವಿಕೆ ಕುರಿತು ಜಲ ಜಾಗೃತಿ ಮೂಡಿಸುವ ದಿಸೆಯಲ್ಲಿ ಇದೇ ಮೊದಲ ಬಾರಿಗೆ ನದಿ ಉತ್ಸವವನ್ನು ಆಚರಿಸಲಾಗುತ್ತಿದೆ. ಕಾವೇರಿ ನೀರಾವರಿ ನಿಗಮ ನೀರಾವರಿ ಇಲಾಖೆಯ ವತಿಯಿಂದ ಜಿಲ್ಲಾಡಳಿತ ಹಾಗೂ ಜನಸಮುದಾಯದ ಸಹಭಾಗಿತ್ವದಲ್ಲಿ ತಾ. ೨೧ (ಇಂದು) ರಂದು ಈ ನದಿ ಉತ್ಸವ ನಡೆಯಲಿದೆ.

ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮಘಟ್ಟದ ಬ್ರಹ್ಮಗಿರಿ ಬೆಟ್ಟದ ತಪ್ಪಲು ತಲಕಾವೇರಿಯಲ್ಲಿ ಗುಪ್ತಗಾಮಿನಿಯಾಗಿ ಉಗಮ ವಾಗುವ ಜೀವನದಿ ಕಾವೇರಿಯು ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಮೂಲಕ ಸುಮಾರು ೭೬೫ ಕಿ.ಮೀ.ಗಳಷ್ಟು ದೂರ ಹರಿದು ತಮಿಳುನಾಡಿನ ಪೂಂಪ್‌ಹಾರ್ ಎಂಬಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ನಾಡಿನ ಕಲೆ, ಸಂಸ್ಕೃತಿ, ಪರಂಪರೆಯೊAದಿಗೆ ಲಕ್ಷಾಂತರ ರೈತರ ಜೀವನಾಡಿಯಾದ ಕಾವೇರಿಯು ನದಿಪಾತ್ರದ ಹಳ್ಳಿಗಳು, ವಿವಿಧ ಪಟ್ಟಣಗಳು, ನಗರಗಳು ಸೇರಿದಂತೆ ರಾಜ್ಯದ ರಾಜಧಾನಿ ಬೆಂಗಳೂರು ನಗರದ ಜನತೆಯನ್ನು ಒಳಗೊಂಡು ನಾಡಿನ ಕೋಟ್ಯಾಂತರ ಜನರ ಕುಡಿಯುವ ನೀರನ್ನು ಒದಗಿಸುವ ಮೂಲ ಆಸರೆಯಾಗಿದೆ.

ನದಿ ಸಂರಕ್ಷಣೆಗೆ ನಾವೇನು ಮಾಡೋಣ ? : ನದಿ ಮೂಲ ಬೆಟ್ಟ ಅಥವಾ ಪರ್ವತ ಶ್ರೇಣಿಗಳು. ಇದಕ್ಕೆ ಮಳೆಯ ನೀರು ಅಥವಾ ಹಿಮಗಡ್ಡೆಗಳೇ ಆಶ್ರಯ. ದಕ್ಷಿಣ ಭಾರತದ ನದಿಗಳಿಗೆ ಮಳೆಯ ನೀರೇ ಮೂಲ. ನದಿಯ ಸಂರಕ್ಷಣೆ ಎಂಬುದು ಕೇವಲ ಸರ್ಕಾರದ್ದು ಮಾತ್ರವಲ್ಲ. ಇದು ನೀರು ಕುಡಿಯುವ ಎಲ್ಲಾ ಜನರ ಕರ್ತವ್ಯ ಕೂಡ ಆಗಿದೆ. ನೀರಿನ ಮಿತ ಬಳಕೆಯ ಸೂತ್ರ ಅನುಸರಿಸುವ ಮೂಲಕ ನದಿ ನೀರನ್ನು ಕಲುಷಿತಗೊಳಿಸದೇ ಪ್ರತಿಯೊಬ್ಬರೂ ಭವಿಷ್ಯತ್ತಿಗಾಗಿ ಸಂರಕ್ಷಿಸಬೇಕಿದೆ. ಇದು ಈತನಕ ಉಪದೇಶ, ಘೋಷಣೆ, ಭಾಷಣಗಳಲ್ಲಿ ಮಾತ್ರ ನಿಂತಿದೆ. ನದಿ ಸಂರಕ್ಷಣೆಗಾಗಿ ನಾವು ಸಾಮೂಹಿಕವಾಗಿ ರಚನಾತ್ಮಕ ದಿಟ್ಟ ಹೆಜ್ಜೆಗಳನ್ನು ಇಡಬೇಕಿದೆ.

ಜಲ ಸಂರಕ್ಷಣೆ : ನೀರು ನೈಸರ್ಗಿಕವಾಗಿ ದೊರೆಯುವ ಒಂದು ಅಮೂಲ್ಯ ಸಂಪತ್ತು. ನೀರಿನ ಪ್ರತಿ ಹನಿಯು ಬಹಳ ಮೌಲ್ಯಯುತವಾಗಿದೆ. ನೀರಿನ ಸಂರಕ್ಷಣೆ ಎಂದರೆ ಅನಗತ್ಯ ನೀರಿನ ಬಳಕೆಯನ್ನು ಕಡಿಮೆ ಮಾಡಲು ನೀರನ್ನು ಸಮರ್ಥವಾಗಿ ಬಳಸುವ ತರಬೇತಿಯಾಗಿದೆ.

ನೀರು ಎಲ್ಲ ಜೀವಿಗಳು ಹಾಗೂ ಎಲ್ಲರ ಜೀವನವನ್ನು ಪೋಷಿಸಲು ಅತ್ಯಗತ್ಯ ಮತ್ತು ಸ್ಥಳೀಯ ಬಳಕೆಯಿಂದ ಹಿಡಿದು ಕೃಷಿ ಮತ್ತು ಉದ್ಯಮ ದÀವರೆಗಿನ ಎಲ್ಲಾ ಚಟುವಟಿಕೆಗಳಿಗೆ ಮೂಲಭೂತ ಬೇಡಿಕೆಯಾಗಿದೆ. ಆದ್ದರಿಂದ, ನಾವು ನೆಲ-ಜಲ ಸೇರಿದಂತೆ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಪರಿಸರಕ್ಕೆ ಮಹತ್ವದ್ದಾಗಿದೆ. ಭೂಮಿಯಲ್ಲಿ ಶೇಕಡಾ ೭೦ ರಷ್ಟು ನೀರಿದ್ದರೂ ನಾವು ಶೇಕಡಾ ೧ ರಷ್ಟು ನೀರನ್ನು ಮಾತ್ರ ಬಳಸ ಬಹುದಾಗಿದೆ.

ಮಾನವ ಜನಸಂಖ್ಯೆಯ ಹೆಚ್ಚಳವು ನೀರಿನ ಸಂಪನ್ಮೂಲಗಳ ಮೇಲೆ ತೀವ್ರ ಒತ್ತಡವನ್ನು ಉಂಟು ಮಾಡಿದೆ. ಇಂದು ನದಿ, ಕೊಳ, ಕೆರೆ, ಜಲಾಶಯ ಮತ್ತು ಅಂತರ್ಜಲದ ದುರ್ಬಳಕೆಯಿಂದಾಗಿ ನಾವು ದಿನೇ ದಿನೇ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದೇವೆ ಮತ್ತು ಬಹುಶಃ ಮುಂಬರುವ ವರ್ಷಗಳಲ್ಲಿ ಈ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಲಿದೆ. ನಾವು ನೀರನ್ನು ಭವಿಷ್ಯತ್ತಿಗಾಗಿ ಉಳಿಸುವ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ ಮತ್ತು ನೀರಿನ ಸಂರಕ್ಷಣೆಗೆ ಗಂಭೀರವಾದ ಪರಿಗಣನೆಯನ್ನು ನೀಡಲೇಬೇಕಾಗಿದೆ. ನೀರಿನ ಕೊರತೆಯಿಂದ ಪರಿಸರದ ಸಮತೋಲನವೂ ಹದಗೆಡುತ್ತದೆ ಮತ್ತು ಅರಣ್ಯ, ವನ್ಯಜೀವಿಗಳು ಇತ್ಯಾದಿ ಪರಿಸರ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಉಂಟಾಗಬಹುದು. ಆದ್ದರಿಂದ, ನಾವು ನದಿ ಹಾಗೂ ಜಲ ಮೂಲಗಳ ಸಂರಕ್ಷಣೆಯೊAದಿಗೆ ಜಲ ಸಂರಕ್ಷಣೆ ಮುಖ್ಯ.

ಯಾವುದೇ ಜೀವಿಯ ಉಗಮವಾಗುವುದು ನೀರಿನಿಂದ. ನಮ್ಮ ದೇಹದ ಶೇಕಡಾ ೭೦ ಭಾಗದಷ್ಟು ನೀರಿನಿಂದ ಸೇರಿದೆ. ಮನುಷ್ಯ ಆಹಾರವಿಲ್ಲದೆ ಕೆಲ ದಿನ ಬದುಕಬಹುದಾದರೂ ನೀರಿಲ್ಲದಿದ್ದರೆ ನಮ್ಮ ಬದುಕೇ ಸಾಧ್ಯವಿಲ್ಲ. ನಾವು ನಮ್ಮ ನಾಡಿನ ಹೆಮ್ಮೆಯ ಜೀವನದಿ ಕಾವೇರಿಯನ್ನು ಎಂದೂ ಬತ್ತಲು, ಮಲಿನಗೊಳ್ಳಲು ಹಾಗೂ ಅಪವ್ಯಯಗೊಳ್ಳಲು ಬಿಡದೇ ಜವಾಬ್ದಾರಿಯಿಂದ ಬಳಕೆ ಮಾಡುವ ಬಗ್ಗೆ ವೈಯಕ್ತಿಕವಾಗಿ ಹಾಗೂ ಸಾಮುದಾಯಿಕವಾಗಿ ಸರ್ಕಾರದ ಬೆಂಬಲ ಪಡೆದು ನದಿ ನೀರನ್ನು ಸಂರಕ್ಷಣೆ ಮಾಡಲು ಸಂಕಲ್ಪ ಮಾಡೋಣ. ನೀರು ಸಾರ್ವಜನಿಕ ಸಂಪತ್ತು ಎಂದು ಅರಿತು ಮುಂದಿನ ಸುಂದರ ಬದುಕಿಗಾಗಿ ನೀರನ್ನು ವಿವೇಕತನದಿಂದ ಬಳಸೋಣ ಮತ್ತು ನೀರನ್ನು ಉಳಿಸೋಣ.

ಬನ್ನಿ, ನೀರು, ನದಿ ಹಾಗೂ ಜಲಮೂಲಗಳ ಸಂರಕ್ಷಣೆಗೆ ಪಣ ತೊಡೋಣ, ನಾಳಿನ ಉತ್ತಮ ಭವಿಷ್ಯಕ್ಕಾಗಿ ನದಿ ನೀರನ್ನು ಸಂರಕ್ಷಿಸೋಣ. ಬನ್ನಿ, ಕಾವೇರಿ ನದಿ ಉತ್ಸವದಲ್ಲಿ ಪಾಲ್ಗೊಳ್ಳಿ, ಭವಿಷ್ಯತ್ತಿಗಾಗಿ ನೀರನ್ನು ಸಂರಕ್ಷಿಸೋಣ.

- ಟಿ.ಜಿ.ಪ್ರೇಮಕುಮಾರ್, ಮುಖ್ಯೋಪಾಧ್ಯಾಯರು,

ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು.

ಮೊ: ೯೪೪೮೫೮೮೩೫೨