ಮುಳ್ಳೂರು, ಅ. ೨೦: ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಮತ್ತು ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಲೂರು-ಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಸ್ವ-ಸಹಾಯ ಸಂಘಗಳ ಸಂಜೀವಿನಿ ಮಾಸಿಕ ಸಂತೆಯನ್ನು ಹಮ್ಮಿಕೊಳ್ಳಲಾಯಿತು.

ಆಲೂರು-ಸಿದ್ದಾಪುರ ಗ್ರಾ.ಪಂ. ಸಂಜೀವಿನಿ ಒಕ್ಕೂಟ ಸೇರಿದಂತೆ ನಿಡ್ತ ಗ್ರಾ.ಪಂ. ಹಂಡ್ಲಿ ಮತ್ತು ಗಣಗೂರು ಗ್ರಾ.ಪಂ.ಗಳಿAದ ಒಟ್ಟು ೩೬ಕ್ಕಿಂತ ಹೆಚ್ಚಿನ ಸಂಜೀವಿನಿ ಸ್ವ-ಸಹಾಯ ಸಂಘಗಳು ಮಳಿಗೆಗಳನ್ನು ಹಾಕಿಕೊಂಡು ಸಂತೆಯಲ್ಲಿ ವ್ಯಾಪಾರ ನಡೆಸಿದರು.

ಸಂಜೀವಿನಿ ಮಾಸಿಕ ಸಂತೆ ಮೇಳವನ್ನು ಆಲೂರು-ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷೆ ಧಮಯಂತಿ ಕರುಂಬಯ್ಯ ಉದ್ಘಾಟಿಸಿ, ಸಂತೆ ಯಶಸ್ವಿಗೊಳ್ಳುವಂತೆ ಶುಭ ಕೋರಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಂತೆ ಮೇಳ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕ ಕುಮಾರ್, ಸರಕಾರ ಸ್ವ-ಸಹಾಯ ಸಂಘಗಳು ತಮ್ಮ ಗ್ರಾಮಗಳಲ್ಲಿ ಸಂಜೀವಿನಿ ಸಂತೆಯನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದು ಮೂರು-ನಾಲ್ಕು ಗ್ರಾ.ಪಂ.ಗಳ ಸಂಜೀವಿನಿ ಒಕ್ಕೂಟಗಳು ಸೇರಿಕೊಂಡು ಒಂದು ಕಡೆಯಲ್ಲಿ ಸಂತೆ ಮೇಳವನ್ನು ನಡೆಸುತ್ತಿದೆ ಎಂದರು. ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಪ್ರತಿ ಗ್ರಾ.ಪಂ.ಯಲ್ಲೂ ಮತ್ತು ಜಿಲ್ಲಾ ಮಟ್ಟದಲ್ಲೂ ಇಂತಹ ಮಾರುಕಟ್ಟೆ ವ್ಯವಸ್ಥೆಯನ್ನು ಸಂಜೀವಿನಿ ಸ್ವಸಹಾಯ ಮಹಿಳೆಯರಿಗೆ ಪಡೆದುಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ಪಿಡಿಓ ಹರೀಶ್, ತಾಲೂಕು ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕ ಸಂದೀಪ್, ವಲಯ ಮೇಲ್ವಿಚಾರಕಿ ಭವ್ಯ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಾನಕಿ ಗಂಗಾಧರ್, ಗ್ರಾ.ಪಂ. ಸದಸ್ಯರು, ತಾಲೂಕು ಕೆಡಿಪಿ ಸಮಿತಿ ಅಧ್ಯಕ್ಷ ಪಿ.ಎನ್. ಗಂಗಾಧರ್, ಪ್ರಮುಖರಾದ ರವಿ, ಸಂಜೀವಿನಿ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ಸಂತೆ ಮೇಳದಲ್ಲಿ ದಿನನಿತ್ಯ ಬಳಕೆ ವಸ್ತುಗಳು, ಆಹಾರ ವಸ್ತುಗಳು, ತರಕಾರಿ ಸೊಪ್ಪು, ತೆಂಗಿನಕಾಯಿ, ರೆಡಿಮೇಡ್ ಬಟ್ಟೆಗಳು, ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಹಣ್ಣು ಹಂಪಲು, ಮಣ್ಣಿನ ದೀಪ, ತಿಂಡಿ ತಿನಿಸು, ಕಾಫಿ ಚಹಾ ಮುಂತಾದ ಮಳಿಗೆಯನ್ನು ಹಾಕಿಕೊಂಡು ವ್ಯಾಪಾರ ನಡೆಸಿದರು.