ಮಡಿಕೇರಿ, ಅ. ೧೯: ಕೊಡವ ಭಾಷೆ, ಕಲೆ, ಸಂಸ್ಕೃತಿ ಬೆಳವಣಿಗೆ ಸೇರಿದಂತೆ ಕೊಡವರ ಸಂಪ್ರದಾಯ, ಆಚಾರ-ವಿಚಾರಗಳಿಗೆ ಒತ್ತು ನೀಡಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಮ್ಮ ಕಾರ್ಯಾವಧಿಯನ್ನು ಸ್ಮರಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩ ವರ್ಷಗಳ ಅವಧಿಯಲ್ಲಿ ಅಕಾಡೆಮಿಯ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ, ಕೊಡವ ಲಿಪಿಯನ್ನು ತರುವ ಪ್ರಾಮಾಣಿಕ ಪ್ರಯತ್ನ ಆಗಿದೆ. ಇದು ಜಾರಿಯೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಪಾರ ಶ್ರಮದಿಂದ ಶಬ್ಧಕೋಶ, ವ್ಯಾಕರಣ ತಯಾರಿ ಮಾಡಿರುವುದು ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಂದ್‌ನಮ್ಮೆ, ಸಾಂಸ್ಕೃತಿಕ ಹಬ್ಬ, ಪದ್ಧತಿ, ಪರಂಪರೆ ಪರಿಚಯಿಸುವ ಸಂಬAಧ ಕಾರ್ಯಕ್ರಮ, ವಿಚಾರ ಸಂಕಿರಣ, ರಂಗಭೂಮಿ ಚಟುವಟಿಕೆಗಳು, ಕೊಡವ ಕಿರುಚಿತ್ರ ತಯಾರಿ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಸಾಂಸ್ಕೃತಿಕ ಅಧ್ಯಯನ ದಾಖಲೀಕರಣ ಪ್ರಕ್ರಿಯೆಯಲ್ಲಿದೆ. ೩ ವರ್ಷಗಳಲ್ಲಿ ೬೨ ಕಾರ್ಯಕ್ರಮಗಳನ್ನು ಮಾಡಿದ ಹೆಗ್ಗಳಿಕೆ ಅಕಾಡೆಮಿ ಹೊಂದಿದೆ ಎಂದು ತಿಳಿಸಿದರು.

ತಮಿಳು ‘ತಿರುಕ್ಕುರಲ್’ನ್ನು ಕೊಡವ ಭಾಷೆಗೆ ತರ್ಜುಮೆ, ಮಂಡಿರ ಜಯಾ ಅಪ್ಪಣ್ಣ ಅವರ ಜಯಭಾರತ ಮಹಾಕಾವ್ಯ ಕನ್ನಡಕ್ಕೆ ಅನುವಾದ, ಕೊಡವ ಸಾಹಿತಿಗಳ ಜಯಂತಿ ಆಚರಣೆ, ಕಲಾವಿದರಿಗೆ ವಾದ್ಯ ಪರಿಕರಗಳ ವಿತರಣೆ, ೧೯ ಸಂಶೋಧನೆಗಳ ಪ್ರಕಟ, ಅಕಾಡೆಮಿಯ ನೂತನ ಬೈಲಾ ರಚನೆ, ಕೊಡವ ಪಡಿಪು ಪಾಠ ಪುಸ್ತಕ ರಚನೆ, ಕೊಡವ ಪಿ.ಜಿ. ಡಿಪ್ಲೋಮಾ ಕೋರ್ಸ್, ಪದವಿ ಮಟ್ಟದಲ್ಲಿ ಕೊಡವ ಭಾಷೆ ಸೇರ್ಪಡೆ, ಕೊಡವ ಭಾಷೆಯಲ್ಲಿ ಎಂ.ಎ. ಸ್ನಾತಕೋತ್ತರ ಪಡೆಯಲು ಅವಕಾಶ, ಕೊಡವ ಶಬ್ಧಕೋಶ ರಚನೆ, ಕೊಡವ ಲಿಪಿ ತಯಾರಿ, ವ್ಯಾಕರಣ ಪುಸ್ತಕ ತಯಾರಿ ಹೀಗೆ ಅನೇಕ ಕಾರ್ಯಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದು ಪಾರ್ವತಿ ಅಪ್ಪಯ್ಯ ಮಾಹಿತಿ ನೀಡಿದರು.

ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಆಗ್ರಹವನ್ನು ಸರಕಾರದ ಮುಂದಿಟ್ಟು ಇದಕ್ಕೆ ಪೂರಕವಾಗಿ ೧೫೦ ಪುಟಗಳ ದಾಖಲೆಯನ್ನು ಒದಗಿಸಿದ್ದೇವೆ. ಐ.ಮಾ.ಮುತ್ತಣ್ಣ ತಯಾರಿಸಿದ ಕೊಡವ ಲಿಪಿ ಅನುಮೋದನೆ ಪಡೆದುಕೊಂಡಿದ್ದು, ಈ ಬೇಡಿಕೆ ಈಡೇರುವುದು ಖಚಿತ. ಇದರ ಜೊತೆಗೆ ೨೧ ಮಂದಿಗೆ ಫಿಲೋಶಿಪ್, ೮೮ ಪುಸ್ತಕಗಳು ಪ್ರಕಟಗೊಂಡಿವೆ. ೧೨ ಮಂದಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಕಾಡೆಮಿಯ ಪ್ರಯತ್ನದಿಂದ ಜಿಲ್ಲೆಯ ೬ ಶಾಲೆಗಳಲ್ಲಿ ಕೊಡವ ಭಾಷೆ ಬೋಧನೆಯಾಗುತ್ತಿದೆ ಎಂದು ವಿವರಿಸಿದರು.

ಮಡಿಕೇರಿಯಲ್ಲಿ ಕೊಡವ ಮ್ಯೂಸಿಯಂ ಸ್ಥಾಪನೆ ಮಾಡುವುದು ನಮ್ಮ ಗುರಿಯಾಗಿತ್ತು. ಅದೊಂದು ಸಾಧ್ಯವಾಗಿಲ್ಲ. ಆದರೆ, ಈ ಸಂಬAಧ ಪ್ರಕ್ರಿಯೆಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಇದು ಸ್ಥಾಪನೆಯಾಗಲಿದೆ. ಇರುವ ಸೀಮಿತ ಅವಕಾಶ ಹಾಗೂ ಸಂಪನ್ಮೂಲದಲ್ಲಿ ಶಕ್ತಿ ಮೀರಿ, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ್ದೇವೆ ಎಂದರು.

ಗೋಷ್ಠಿಯಲ್ಲಿ ಅಕಾಡೆಮಿಯ ಮಾಜಿ ಸದಸ್ಯರುಗಳಾದ ಗೌರಮ್ಮ ಮಾದಮ್ಮಯ್ಯ, ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬೀರ ಸರಸ್ವತಿ, ಮಾಣಿಗೆರೆ ಶಂಭಯ್ಯ, ತೇಲಪಂಡ ಕವನ್ ಕಾರ್ಯಪ್ಪ ಹಾಜರಿದ್ದರು.