ಕಣಿವೆ, ಅ. ೧೮: ಸಮಾಜದಲ್ಲಿ ಕಷ್ಟಪಟ್ಟು ದುಡಿದು ತಿನ್ನುವ ಜನರಿದ್ದಾರೆ. ಹಾಗೆಯೇ ದುಡಿಯದೆಯೇ ವಾಮಮಾರ್ಗದಿಂದ ಗಳಿಸಿ ತಿನ್ನುವ ಜನರೂ ಇದ್ದಾರೆ.
ಮತ್ತೊಂದೆಡೆ ಜೀವನಪರ್ಯಂತ ದುಡಿದು ದುಡಿದು ಸಾಕಾಗಿ ಬಳಲಿ ಬೆಂದು ಮಡಿದವರೂ ಇದ್ದಾರೆ. ಇಂತಹವರ ಮಧ್ಯೆ ಯಾವುದೇ ದುಡಿಮೆ ಮಾಡದೆಯೆ ಜೀವಿಗಳ ಜೊತೆ ಚೆಲ್ಲಾಟವಾಡುತ್ತಾ ಜೀವಿಸುವವರೂ ಇದ್ದಾರೆ.
ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಇತ್ತೀಚಿಗೆ ಇಂತಹ ಪ್ರಸಂಗಗಳು ಕಾಣ ಸಿಗುತ್ತಿವೆ.
ಅಂದರೆ ನೆರೆಯ ಆಂಧ್ರಪ್ರದೇಶದ ಕೆಲವು ಬಡ ಮಹಿಳೆಯರು ಕಂಕುಳಲ್ಲಿ ಎಳೆಯ ಹಸುಳೆಗಳನ್ನು ಸಿಕ್ಕಿಸಿಕೊಂಡು ಕೈಯಲ್ಲಿ ಹಸುವಿಗೆ ಕಟ್ಟಿದ ಹಗ್ಗವನ್ನು ಹಿಡಿದು ಮನೆ ಮನೆಗಳ ಮುಂದೆ, ಅಂಗಡಿ ಮಳಿಗೆಗಳ ಮುಂದೆ ನಿಂತು ಏನಾದರೂ ಕೊಡಿ ಎಂದು ಕೇಳುತ್ತಿರುವ ಚಿತ್ರಣಗಳು ಸಾಮಾನ್ಯವಾಗಿ ಕಾಣ ಸಿಗುತ್ತಿವೆ.
ಇವರೊಂದಿಗೆ ದಿನದ ಮುಂಜಾನೆಯಿAದ ಮುಸ್ಸಂಜೆಯವರೆಗೂ ಇಡೀ ಬೀದಿ ಸುತ್ತಿಸುವ ಹಸುಗಳಿಗೆ ಹುಲ್ಲು ಕೊಡುವುದಾದರೂ ಯಾವಾಗ ಎಂಬದು ತಿಳಿಯುತ್ತಿಲ್ಲ.
ಪಟ್ಟಣ ಪ್ರದೇಶದಲ್ಲಿ ಹುಲ್ಲು ಇವರಿಗೆ ಸಿಗುವುದಾದರೂ ಎಲ್ಲಿಂದ ಮತ್ತು ತರುವವರು ಯಾರು? ಎಂಬ ಪ್ರಶ್ನೆಗಳು ಜನಸಾಮಾನ್ಯರದ್ದಾಗಿವೆ.
ಹಳ್ಳಿಗಳಲ್ಲಾದರೆ ಹಸು ಕರುಗಳೊಡನೆ ಜೀವಿಸುವ ಕೃಷಿಕರು ಹಾಗೂ ತಾಯಂದಿರು ಈ ಹಸುಗಳಿಗೆ ತಮ್ಮ ಮನೆಯಂಗಳದ ಕೊಟ್ಟಿಗೆಯಲ್ಲಿ ಇಟ್ಟಿರುವ ಹುಲ್ಲು ಹಾಗೂ ಕುಡಿಯಲು ನೀರನ್ನು ಉದಾರವಾಗಿಯೇ ಕೊಡುತ್ತಾರೆ.
ಅಷ್ಟೇ ಅಲ್ಲ, ಎಳೆಯ ಹಸುಳೆಗಳನ್ನು ಕಂಕುಳಲ್ಲಿನ ಸೀರೆಯ ಗಂಟಿನೊಳಗೆ ಬಂಧಿಯಾಗಿಸಿ ಜೊತೆಯಲ್ಲೇ ಒಯ್ಯುವ ಕಂದಮ್ಮಗಳನ್ನು ಕಂಡು ಮಮ್ಮಲ ಮರುಗುವ ಹಳ್ಳಿಗಳ ಜನರು ವಿಶೇಷವಾಗಿ ತಾಯಂದಿರು ಈ ಮಂದಿಯ ಮೇಲೆ ಕರುಣೆ ತೋರಿ ತಿನ್ನಲು ಕುಡಿಯಲು ಕೊಡುವ ಜೊತೆಗೆ ಹಸುಳೆಗೆ ಕುಡಿಸಲು ಬಿಸಿ ಬಿಸಿ ಹಾಲನ್ನು ಕೂಡ ಉದಾರವಾಗಿ ನೀಡುತ್ತಾರೆ.
ಆದರೆ ಆಧುನಿಕತೆಯಿಂದ ಅಟ್ಟಹಾಸ ಮೆರೆಯುತ್ತಿರುವ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಹಿಳೆಯರೂ ಈ ಮಂದಿಯ ಮೇಲೆ ಕರುಣೆ ತೋರುವುದು ಬಹಳ ವಿರಳವೆನ್ನಬಹುದು. ಇನ್ನು ಹಸುವಿಗೆಲ್ಲಿಯ ಹುಲ್ಲು. ಹಸುಳೆಗೆಲ್ಲಿಯ ಹಾಲು... ?
ಒಟ್ಟಾರೆ, ಇಂತಹ ಗಳಿಕೆೆಯ ಹಿಂದಿನ ವಾಸ್ತವವನ್ನು ಅರಿಯುವ ಕೆಲಸ ಪ್ರಾಮಾಣಿಕವಾಗಿ ಆಗಬೇಕಿದೆ.
ಕೆಲವು ದುರುಳರು ಎಲ್ಲಿಂದಲೋ ಎಳೆಯ ಮಕ್ಕಳನ್ನು ಅಪಹರಿಸಿ ತಂದು, ಬಡತನದಿಂದ ಬೇಯುತ್ತಿರುವ ಬಡ ಅಮಾಯಕ ಮಹಿಳೆಯರಿಗೆ ಆಮಿಷವೊಡ್ಡಿ ಆ ಮಹಿಳೆಯರ ಕಂಕುಳಿಗೆ ಹಸುಳೆಗಳನ್ನಿಟ್ಟು ಅದರಿಂದ ಸಿಗುವ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ದಂಧೆಕೋರರ ಜಾಲವನ್ನೂ ಅಲ್ಲಗಳೆಯುವಂತಿಲ್ಲ. ಹಾಗಾಗಿ ಜಿಲ್ಲಾಡಳಿತ ಈ ರೀತಿಯ ಪ್ರದರ್ಶನದ ಬಗ್ಗೆ ತನಿಖೆ ನಡೆಸುವುದೊಳಿತು. ಹಸಿದ ಹೊಟ್ಟೆ ತುಂಬಿಸಲು ತಾವು ಪ್ರೀತಿಯಿಂದ ಸಾಕಿದ ಹಸುವನ್ನು ಎಳೆ ತಂದು ಬೀದಿಗಳಲ್ಲಿ ಸುತ್ತಿಸುತ್ತಿದ್ದಾರೆ? ಇಲ್ಲವೇ ಅದರ ಹಿಂದೆ ಕಾಣದ ಕೈಗಳ ಕೈವಾಡಗಳಿವೆಯೇ? ಪತ್ತೆ ಹಚ್ಚಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ದಿನವಿಡೀ ಬೀದಿಗಳನ್ನು ಸುತ್ತುವ ಆರೋಗ್ಯ ಹೊಂದಿರುವ ಈ ಮಹಿಳೆಯರು ಕೃಷಿ, ಕೈಗಾರಿಕೆ ಅಥವಾ ಹೋಟೆಲ್ ಮೊದಲಾದ ರಂಗಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದು ಜೀವಿಸುವ ಅವಕಾಶಗಳು ಯಥೇಚ್ಛವಾಗಿರುವ ಈ ಹೊತ್ತಿನಲ್ಲಿ ಈ ರೀತಿ ಎಳೆಯ ಹಸುಳೆ ಹಾಗೂ ಮುಗ್ಧ ಹಸುವನ್ನು ಗೋಳು ಹೊಯ್ದುಕೊಂಡು ದಿನವಿಡೀ ಸುತ್ತಾಡಿಸುವುದಕ್ಕೆ ಕಡಿವಾಣ ಹಾಕಬೇಕಿದೆ ಅಷ್ಟೆ.
- ಕೆ.ಎಸ್. ಮೂರ್ತಿ