ಮಡಿಕೇರಿ, ಅ. ೧೮: ರಕ್ಷಿತಾರಣ್ಯ ದಲ್ಲಿ ಕಡವೆಯನ್ನು ಬೇಟೆಯಾಡಿ ಅದನ್ನು ಮಾಂಸ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದಬ್ಬಡ್ಕ ಗ್ರಾಮದ ಕೃಷ್ಣಪ್ಪ (೪೭), ಕೆ.ಎಸ್. ಪುರುಷೋತ್ತಮ್ (೪೮) ಬಂಧಿತ ಆರೋಪಿಗಳು. ಸಂಪಾಜೆ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಾದ ದಬ್ಬಡ್ಕದ ರಕ್ಷಿತಾರಣ್ಯದಲ್ಲಿ ಕಡವೆ ಯೊಂದನ್ನು ಬೇಟೆಯಾಡಿ ಕೊಂದು ಅದನ್ನು ಮಾಂಸ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಗಳನ್ನು ಬಂಧಿಸಿದ್ದಾರೆ. ಇವರಿಂದ ೧೦೦ ಕೆಜಿ ಕಡವೆ ಮಾಂಸ, ಕಡವೆಯ ತಲೆ, ಕಾಲು, ಕೃತ್ಯಕ್ಕೆ ಬಳಸಿದ ಕತ್ತಿ, ಟಾರ್ಪಲ್, ಹಗ್ಗವನ್ನು ವಶಪಡಿಸಿ ಕೊಳ್ಳಲಾಗಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ನಿಸಾರ್ ಅಹಮ್ಮದ್, ಅರಣ್ಯ ರಕ್ಷಕ ಕಾರ್ತಿಕ್, ಅರಣ್ಯ ವೀಕ್ಷಕ ಕೂಸಪ್ಪ, ಮನೋಜ್ ಕುಮಾರ್ ಇದ್ದರು.