ಸಿದ್ದಾಪುರ, ಅ. ೧೮: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಸ-ತ್ಯಾಜ್ಯಗಳು ತುಂಬಿ ದುರ್ನಾತ ಬೀರುತ್ತಿದ್ದು, ಸ್ವಚ್ಛತೆಯನ್ನು ಕಾಪಾಡದೇ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿ ಗ್ರಾ.ಪಂ. ವಿರುದ್ಧ ಸಿ.ಪಿ.ಐ.(ಎಂ) ಪಕ್ಷದ ಕಾರ್ಯದರ್ಶಿ ಪಿ.ಆರ್. ಭರತ್ ನೇತೃತ್ವದಲ್ಲಿ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ನೆಲ್ಲಿಹುದಿಕೇರಿ ಗ್ರಾಮದ ಪಟ್ಟಣ ಹಾಗೂ ಎಂ.ಜಿ. ಕಾಲೋನಿ ಮುಖ್ಯ ರಸ್ತೆಗಳು, ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕಸಗಳು ಹಾಗೂ ತ್ಯಾಜ್ಯಗಳು ತುಂಬಿದ್ದು, ಇವುಗಳನ್ನು ವಿಲೇವಾರಿ ಮಾಡದೇ ಇರುವ ಪಂಚಾಯಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶುಚಿತ್ವವನ್ನು ಕಾಪಾಡಬೇಕಾದ ಪಂಚಾಯಿತಿಯು ಅಶುಚಿತ್ವಕ್ಕೆ ಸಹಕಾರ ನೀಡುತ್ತಿದೆ. ಕಸವಿಲೇವಾರಿಗೆ ಸೂಕ್ತ ಜಾಗವನ್ನು ಗುರುತಿಸದೇ ರಾಜಕೀಯದಲ್ಲೇ ಕಾಲಹರಣ ಮಾಡುತ್ತಿದ್ದಾರೆಂದು ಪ್ರತಿಭಟನೆಗಾರರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿ.ಪಿ.ಐ.(ಎಂ) ಪಕ್ಷದ ಪದಾಧಿಕಾರಿಗಳಾದ ಮೊಣ್ಣಪ್ಪ, ಟಿ.ಟಿ. ಉದಯಕುಮಾರ್, ರವಿ, ಚಂದ್ರನ್, ರಾಮಚಂದ್ರ, ಮುಸ್ತಫ ಇನ್ನಿತರರು ಹಾಜರಿದ್ದರು.