ಶನಿವಾರಸಂತೆ, ಅ. ೧೮: ಸ್ಥಳೀಯ ಗ್ರಾಮ ಪಂಚಾಯಿತಿಯ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಫರ್ಜಾನಾ ಅಧ್ಯಕ್ಷತೆಯಲ್ಲಿ, ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಕಸ ವಿಲೇವಾರಿ, ಬಸ್ ನಿಲ್ದಾಣ ನಿರ್ಮಾಣ, ಸ್ವಾಮಿ ವಿವೇಕಾನಂದ ಯುವಕ ಸಂಘದ ರಚನೆ, ಉದ್ಯಾನ, ಅಂಗನವಾಡಿ ನಿರ್ಮಾಣ, ಪ್ಲಾಸ್ಟಿಕ್ ನಿಷೇಧ, ಹರಾಜು ಪ್ರಕ್ರಿಯೆ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಕನ್ನಡ ರಾಜ್ಯೋತ್ಸವ ಆಚರಣೆ, ಗ್ರಾಮಾಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ಸದಸ್ಯರು ಗಂಭೀರ ಚರ್ಚೆ ನಡೆಸಿ, ಸಭೆಯಲ್ಲಿ ತೀರ್ಮಾನವಾಗುವ ವಿಚಾರಗಳನ್ನು ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.
ಸದಸ್ಯರಾದ ಸರ್ದಾರ್ ಅಹಮ್ಮದ್, ಎಸ್.ಎನ್. ರಘು ಹಾಗೂ ಆದಿತ್ಯ ಗೌಡ ತ್ಯಾಜ್ಯ ವಿಲೇವಾರಿ ಬಗ್ಗೆ ಮಾತನಾಡಿ, ೫-೬ ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಕಸ ವಿಲೇವಾರಿಗಾಗಿ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಮಂಜೂರು ಮಾಡಿದ್ದರು. ಅಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಂಬAಧಪಟ್ಟ ಕಾಮಗಾರಿ ಆರಂಭಿಸುವಾಗ ಅಲ್ಲಿನ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಆಗಾಗ್ಗೆ ಚರ್ಚೆ ನಡೆದು ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಲಾಗಿತ್ತು. ಇದೀಗ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು ಹಣ ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭಿಸಿದಾಗಲೂ ಗ್ರಾಮಸ್ಥರು ಮತ್ತೆ ಅಡ್ಡಿ ಮಾಡುತ್ತಿದ್ದರೂ ಅಧ್ಯಕ್ಷೆ ಮತ್ತು ಪಿಡಿಓ, ಆಡಳಿತ ಮಂಡಳಿ ಸದಸ್ಯರ ಗಮನಕ್ಕೆ ತಂದಿಲ್ಲ. ಇದಕ್ಕೆ ಅಧ್ಯಕ್ಷರ ನಿರ್ಲಕ್ಷö್ಯವೇ ಕಾರಣ ಎಂದು ಆಕ್ಷೇಪಿಸಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಮೇಲಾಧಿಕಾರಿಗಳು ಕಸ ವಿಲೇವಾರಿಗೆ ಸ್ಥಳ ಗುರುತಿಸಿ ಕೊಟ್ಟಿದ್ದರೂ ಕಸ ವಿಲೇವಾರಿ ಘಟಕ ನಿರ್ಮಿಸಲು, ವಿಲೇವಾರಿ ಮಾಡಲು ಅಲ್ಲಿನ ಕೆಲ ಗ್ರಾಮಸ್ಥರು ಅಡ್ಡಿಪಡಿಸು ವುದು ಕಾನೂನು ಉಲ್ಲಂಘನೆ ಯಾಗುತ್ತದೆ. ಹಾಗಾಗಿ ಪೊಲೀಸರ ಬಂದೋಬಸ್ತ್ನಲ್ಲಿ ಕಸ ವಿಲೇವಾರಿ ಘಟಕ ಕಾಮಗಾರಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ನಿರ್ಣಯಿಸಿದರು.
ಗ್ರಾಮ ಪಂಚಾಯಿತಿಯಿAದ ನಡೆಯುವ ವಿಶೇಷ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಮೊದಲು ವಿಶೇಷ ತುರ್ತು ಸಭೆ ನಡೆಸಬೇಕು. ಪ್ರತಿ ವಾರ್ಡಿನ ಸದಸ್ಯರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುವ ಸಂದರ್ಭ ಆ ಸದಸ್ಯರು ಹಾಜರಿದ್ದು, ಚಾಲನೆ ನೀಡುವ ನಿಯಮ ಪಾಲಿಸಿದರೆ ಗ್ರಾಮಾಭಿವೃದ್ಧಿ ಜೊತೆಗೆ ಕಾಮಗಾರಿ ಬಗ್ಗೆ ಮಾಹಿತಿ ದೊರೆತು ದಾಖಲಾತಿಯಾಗುತ್ತದೆ ಎಂದು ಸದಸ್ಯರಾದ ಎಸ್.ಸಿ. ಶರತ್ ಶೇಖರ್ ಹಾಗೂ ಸರ್ದಾರ್ ಅಹಮ್ಮದ್ ಪಿಡಿಓ ಬಿ.ಜೆ. ಮೇದಪ್ಪ ಅವರಿಗೆ ಸೂಚಿಸಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಗ್ರಾಮ ಪಂಚಾಯಿತಿಯ ವಾಣಿಜ್ಯ ಮಳಿಗೆ ಬಾಡಿಗೆದಾರರು ನೋಟೀಸ್ ನೀಡಿದ್ದರೂ ಬಾಕಿ ಬಾಡಿಗೆ ಪಾವತಿಸದಿರುವುದರಿಂದ ಪಂಚಾಯಿತಿ ಕಾನೂನು ರೀತಿ ಆ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ನೀಡುವಂತೆ ಸದಸ್ಯ ಶರತ್ ಶೇಖರ್ ಹೇಳಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿ ೭೫ ಸೆಂಟ್ ಜಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಪಂಚಾಯಿತಿ ಈ ಹಿಂದೆ ನಿರ್ಣಯಿಸಿದ್ದ ವಿಚಾರವನ್ನು ಪ್ರಸ್ತಾಪಿಸಿ ಶೀಘ್ರ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು, ಸರ್ದಾರ್ ಅಹಮ್ಮದ್, ಆದಿತ್ಯಗೌಡ, ಗೀತಾ, ಸರೋಜಾ, ಸರಸ್ವತಿ, ಕಾವೇರಿ, ಪಿಡಿಓ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ವಸಂತ್, ಫೌಜಿಯಾ, ಲೀಲಾ ಹಾಜರಿದ್ದರು.