ಸೋಮವಾರಪೇಟೆ, ಅ. ೧೮: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಬಿ. ಸೋಮಯ್ಯ (ಅರೆ ಯೂರು ಜಯಣ್ಣ) ಹಾಗೂ ಉಪಾಧ್ಯಕ್ಷ ರಾಗಿ ರೂಪಾ ಸತೀಶ್ ಅವರುಗಳು ಆಯ್ಕೆಯಾಗಿದ್ದಾರೆ. ಸಂಘದ ಸಭಾಂಗಣದಲ್ಲಿ ಸಂಘದ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಹಿಂದೆ ಅಧ್ಯಕ್ಷರಾಗಿದ್ದ ಹೆಚ್.ಕೆ. ಮಾದಪ್ಪ ಹಾಗೂ ಉಪಾಧ್ಯಕ್ಷರಾಗಿದ್ದ ಬಿ.ಎಂ. ಈಶ್ವರ್ ಅವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಿ.ಬಿ. ಸೋಮಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೂಪಾ ಸತೀಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಕ್ಷೇತ್ರ ವಿಸ್ತರಣಾಧಿಕಾರಿ ಪಿ.ಬಿ. ಮೋಹನ್ ಅವರು ಅಧ್ಯಕ್ಷ, ಉಪಾಧ್ಯಕ್ಷರುಗಳ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಭ ಸಂಘದ ಎಲ್ಲಾ ನಿರ್ದೇಶಕರುಗಳು ಹಾಜರಿದ್ದರು.