ಮಡಿಕೇರಿ, ಅ.೧೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಮಾತನಾಡಿ ಖ್ಯಾತ ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ಅವರು ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು, ಇವರ ಮರಣದ ದಿನವಾದ ಸೆಪ್ಟೆಂಬರ್, ೨೮ ರಂದು ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ರೇಬಿಸ್ ರೋಗಕ್ಕೆ ರೋಗ ಬರುವ ಮೊದಲೇ ರೋಗ ನಿರೋಧಕ ಲಸಿಕೆ ಹಾಕಿಸಬೇಕು. ಬಂದ ನಂತರ ಹಾಕಿಸಿದರೆ ಪ್ರಯೋಜನವಿಲ್ಲ. ಎಲ್ಲರೂ ರೇಬಿಸ್ ರೋಗದ ಬಗ್ಗೆ ಉದಾಸೀನ ಮಾಡದೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ೧೫ ವರ್ಷದ ಒಳಗಿನ ಮಕ್ಕಳು ನಾಯಿ ಕಡಿತಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ ಹಾಗೂ ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ರೇಬಿಸ್ ಪ್ರಕರಣಗಳು ಕಂಡು ಬಂದಿಲ್ಲ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಮಾತನಾಡಿ ರೇಬಿಸ್ ರೋಗದ ಬಗೆಗಿರುವ ಆತಂಕಗಳು, ರೇಬಿಸ್ ದಿನಾಚರಣೆಯ ಮಹತ್ವ, ರೇಬಿಸ್ ರೋಗನಿರೋಧಕ ಲಸಿಕೆಯ ವಿವರಗಳು, ಸಾಕು ಪ್ರಾಣಿಗಳಿಗೆ ಹಾಕಿಸಬೇಕಾದ ರೇಬಿಸ್ ರೋಗ ನಿರೋಧಕ ಲಸಿಕೆ ಬಗ್ಗೆ ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಅವರು ಪ್ರಾತ್ಯಕ್ಷತೆ ಮೂಲಕ ರೇಬಿಸ್ ರೋಗದ ಲಕ್ಷಣಗಳು, ಹರಡುವ ಬಗ್ಗೆ, ರೋಗನಿರೋಧಕ ಲಸಿಕೆ, ತಡೆಗಟ್ಟುವಿಕೆ, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯಿತ್ತರು.

ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ರೇಬಿಸ್ ರೋಗದಿಂದ ಜಾಗತಿಕವಾಗಿ ೫೫ ಲಕ್ಷ ಜನ ಸಾಯುತ್ತಿದ್ದು, ನಮ್ಮ ದೇಶದಲ್ಲಿ ಸುಮಾರು ೨೦ ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ವರ್ಷಕ್ಕೆ ೨೫೦ ದಶಲಕ್ಷ ಜನರು ನಾಯಿಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ನಾಯಿ ಕಡಿತವನ್ನು ಯಾರೂ ನಿರ್ಲಕ್ಷಿಸದೇ ನಾಯಿ ಕಡಿದ ತಕ್ಷಣ ಕನಿಷ್ಟ ೧೦ ನಿಮಿಷಗಳ ಕಾಲ ನೀರು ಹಾಗೂ ಸೋಪಿನಿಂದ ನಿರಂತರವಾಗಿ ಆ ಭಾಗವನ್ನು ತೊಳೆಯಬೇಕು. ಬಳಿಕ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕು, ಸಾಕು ನಾಯಿಗಳಿಗೂ ತಪ್ಪದೇ ಕಾಲಕಾಲಕ್ಕೆ ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು. ಪ್ರಾಂಶುಪಾಲರಾದ ವಿಜಯ್ ಅವರು ಎಲ್ಲರೂ ರೇಬಿಸ್ ರೋಗದ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿ ರೋಗ ಬರದಂತೆ ಮುಂಜಾಗ್ರತೆ ವಹಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್, ಉಪನ್ಯಾಸಕ ವೃಂದದವರು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದೇಚಮ್ಮ, ಕಾರ್ಯಕ್ರಮ ವ್ಯವಸ್ಥಾಪಕರಾದ ನಿಲೀಮ್, ರಘು ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ನಿರೂಪಿಸಿ, ವಂದಿಸಿದರು.