ಮಡಿಕೇರಿ, ಅ. ೧೭: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಕುಶಾಲನಗರದ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆಯ ಕಲಿಕಾ ಮಕ್ಕಳ ಗೆಜ್ಜೆಪೂಜೆ ಕಾರ್ಯಕ್ರಮ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿತು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬದಲಾಗುತ್ತಿರುವ ಆಧುನಿಕ ಜೀವನ ಘಟ್ಟದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಗೀತ ಹಾಗೂ ಭರತ ನಾಟ್ಯಗಳಂತಹ ಕಲೆಗಳನ್ನು ಕಲಿಸುವ ಮೂಲಕ ಮಕ್ಕಳನ್ನು ಸಾಂಸ್ಕೃತಿಕ ವಾಗಿ ಸನ್ನದ್ಧಗೊಳಿಸಬೇಕೆಂದು ಹೇಳಿದರು. ಮತ್ತೋರ್ವ ಅತಿಥಿ ಮಡಿಕೇರಿ ಸಾರಿಗೆ ಇಲಾಖೆಯ ಉಪ ಅಧೀಕ್ಷಕಿ ಗೀತಾ ಪ್ರವೀಣ್ ಮಾತನಾಡಿ, ನಮ್ಮ ದೇಶದ ಇತಿಹಾಸ ಪರಂಪರೆ ಸಾರುವ ಕಲೆ ಭರತನಾಟ್ಯ ಎಂದು ಹೇಳಿದರು.
ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯ ಪೋಷಕರಾದ ಶಿವಣ್ಣ, ವ್ಯವಸ್ಥಾಪಕ ಬಿ.ಎಸ್. ವಿನಯ್, ಕಾರ್ಯದರ್ಶಿ ಸುರೇಶ್, ಸಂಗೀತ ನೃತ್ಯ ಶಾಲೆಯ ಗುರುಗಳಾದ ವಿದೂಷಿ ಪೂರ್ಣಿಮಾ ವಿನಯ್ ಇದ್ದರು. ಕಾರ್ಯಕ್ರಮದಲ್ಲಿ ಸಾಧನೆ ತೋರಿದ ನಾಟ್ಯಾನಿಕೇತನ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕಿ ರೂಪಾ ನಿರೂಪಿಸಿದರು.