ಮಡಿಕೇರಿ, ಅ. ೧೬: ಜಿಲ್ಲೆಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಸಂಘರ್ಷ ಸೃಷ್ಟಿಸಬೇಕೆಂಬ ಸಂಚಿನ ಕುರಿತ ‘ಆಡಿಯೋ ವೈರಲ್’ ಪ್ರಕರಣದಲ್ಲಿ ಬಂಧಿತರಾಗಿದ್ದ ನಗರಸಭಾ ಸದಸ್ಯ ಸೇರಿ ಈರ್ವರಿಗೆ ಜೆಎಂಎಫ್‌ಸಿ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಜೆಡಿಎಸ್ ಮುಖಂಡ, ನಗರಸಭಾ ಸದಸ್ಯ ಮುಸ್ತಾಫ ಹಾಗೂ ಬೆಟ್ಟಗೇರಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲ್ಲಾ ನಡುವೆ ನಡೆದ ಮೊಬೈಲ್ ಸಂಭಾಷಣೆಯ ತುಣುಕನ್ನು ಮಡಿಕೇರಿಯ ಶೇಷಪ್ಪ ರೈ ತಾ. ೧೫ ರಂದು ಪೊಲೀಸರಿಗೆ ನೀಡಿದ ಬೆನ್ನಲ್ಲೆ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.
ಭಾನುವಾರವಾದ ಹಿನ್ನೆಲೆ ಜೆಎಂಎಫ್‌ಸಿ ನ್ಯಾಯಾಧೀಶರ ಮನೆಗೆ ಆರೋಪಿಗಳನ್ನು ವಿಚಾರಣೆಗೆ ಹಾಜರುಪಡಿಸಲಾಯಿತು. ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿರುವ ಕೋರ್ಟ್ ರಾಜ್ಯ ಬಿಟ್ಟು ಹೋಗದಂತೆ, ಪೊಲೀಸರು ಹೇಳಿದಾಗ ವಿಚಾರಣೆಗೆ ಹೋಗುವಂತೆ ನಿರ್ದೇಶಿಸಿದೆ. ಅಲ್ಲದೆ ತಾ. ೧೭ ರಂದು (ಇಂದು) ಮತ್ತೊಮ್ಮೆ ನ್ಯಾಯಾಲಯಕ್ಕೆ
(ಮೊದಲ ಪುಟದಿಂದ) ಹಾಜರಾಗುವಂತೆ ತಿಳಿಸಿದೆ. ಆರೋಪಿತರ ಪರ ಎಂ.ಎA. ಸುಫಿಯನ್ ವಾದ ಮಂಡಿಸಿದರು.
ದೂರುದಾರನ ತನಿಖೆಯಾಗಲಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ವಿಚಾರದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದು, ವರಿಷ್ಠರ ಸೂಚನೆಯಂತೆ ಕ್ರಮತೆಗೆದುಕೊಳ್ಳಲಾಗುವುದು.
ಈ ರೀತಿ ಮಾತನಾಡಿರುವುದು ಸರಿಯಲ್ಲ. ಅದಕ್ಕೆ ವಿರೋಧವಿದೆ. ಆದರೆ, ದೂರುದಾರ ಇಷ್ಟು ತಡವಾಗಿ ಧ್ವನಿ ತುಣುಕು ನೀಡಲು ಕಾರಣವೇನು? ಇತ್ತೀಚಿಗಷ್ಟೆ ದಸರಾ ನಡೆಯಿತು ಏನಾದರೂ ಅನಾಹುತ ಸಂಭವಿಸಿದ್ದರೆ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿದ ಗಣೇಶ್, ದೂರುದಾರ ಶೇಷಪ್ಪ ರೈ ಅವರನ್ನು ವಿಚಾರಣೆಗೆ ಒಳಪಡಿಸಿ ದೂರು ನೀಡಲು ತಡವಾಗಿರುವುದನ್ನು ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಹೇಳಿದ್ದಾರೆ.