ಕುಶಾಲನಗರ, ಅ. ೧೬: ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜೀವನದಿ ಕಾವೇರಿಯ ಸ್ವಚ್ಛತೆ ಹಾಗೂ ಪಾವಿತ್ರö್ಯತೆ ದೃಷ್ಟಿಯಿಂದ ತಾ. ೨೧ ರಂದು ‘ಕಾವೇರಿ ನದಿ ಉತ್ಸವ’ವನ್ನು ಅರ್ಥಪೂರ್ಣವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮನವಿ ಮಾಡಿದರು.
ಕಾವೇರಿ ರಿವರ್ ಸೇವಾ ಟ್ರಸ್ಟ್ ವತಿಯಿಂದ ಕುಶಾಲನಗರ ಪಟ್ಟಣದ ವಾಸವಿ ಮಹಲ್ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಕಾವೇರಿ ನದಿ ಉತ್ಸವದ ಕುರಿತು ಚರ್ಚಿಸಲು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಕಾವೇರಿ ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ಕುರಿತು ಮಾತನಾಡಿದ ಸ್ವಾಮೀಜಿ, ಭವಿಷ್ಯದ ದೃಷ್ಟಿಯಿಂದ ನದಿ ನೀರನ್ನು ಕಲುಷಿತಗೊಳಿಸದೆ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲ ಜವಾಬ್ದಾರಿಯಾಗಿದೆ ಎಂದರು.
ಕಾವೇರಿ ನದಿ ಉತ್ಸವ ಆಚರಣೆ ಕುರಿತು ಮಾಹಿತಿ ನೀಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಾವೇರಿ ನದಿ ಸ್ವಚ್ಛತೆಯ ಮಹತ್ವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾವೇರಿ ನದಿ ಉತ್ಸವಕ್ಕೆ ದಕ್ಷಿಣ ಭಾರತದ ಸಾಧುಸಂತರು, ಸ್ವಾಮೀಜಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ಶಾಸಕರುಗಳ ಅಧ್ಯಕ್ಷತೆಯಲ್ಲಿ ನಡೆಯುವ ನದಿ ಉತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಅವರನ್ನು ಆಹ್ವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಉತ್ಸವದ ಅಂಗವಾಗಿ ಕುಶಾಲನಗರದಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು. ನಗರದ ಅಲಂಕಾರ, ಕಲಾ ತಂಡಗಳ ಮೂಲಕ ಸಾಂಸ್ಕೃತಿಕ ಮೆರವಣಿಗೆ ಸೇರಿದಂತೆ ಸಂಜೆ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ನದಿಯಲ್ಲಿ ಮಹಾ ಆರತಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ನದಿ ಸ್ವಚ್ಛತೆ ಹಾಗೂ ಪಾವಿತ್ರತೆ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ನದಿಯ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.
ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮಾತನಾಡಿ, ಎಲ್ಲಾ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ನದಿ ಉತ್ಸವಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್. ಅಶೋಕ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯಾಬಾನು, ಕಾವೇರಿ ಆರತಿ ಸಮಿತಿ ಸಂಚಾಲಕರಾದ ವನಿತಾ ಚಂದ್ರಮೋಹನ್, ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ಫಿಲೋಮಿನಾ ರಕ್ಷಣಾ ವೇದಿಕೆಯ ಅಧ್ಯಕ್ಷ ವೆಂಕಟೇಶ್ ಪೂಜಾರಿ, ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ವಿವಿಧ ಸಂಘಟನೆಗಳ ಪ್ರಮುಖರಾದ ಎಚ್.ವಿ. ಶಿವಪ್ಪ, ಫಿಲಿಪ್ ವಾಸ್, ಸುಮನ್ ಗೌಡ, ಸಿ.ಎಂ ತಿಮ್ಮಯ್ಯ, ಕೂಡನ ಪ್ರಕಾಶ್, ಗಣಿ ಪ್ರಸಾದ್, ಮಂಜುನಾಥ್ ಡಿ.ಸಿ, ಕಾವೇರಿ ರಿವರ್ ಸೇವಾ ಟ್ರಸ್ಟ್ನ ನಿರ್ದೇಶಕರಾದ ಬೋಸ್ ಮೊಣ್ಣಪ್ಪ, ಕೆ.ಜಿ. ಮನು, ಸೋಮಶೇಖರ್, ಮಂಜುನಾಥ್, ಎ.ಎನ್. ಕೃಷ್ಣಮೂರ್ತಿ ಭಟ್, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.