ಗೋಣಿಕೊಪ್ಪಲು, ಅ. ೧೫: ಪೊನ್ನಂಪೇಟೆ ತಾಲೂಕಿನಲ್ಲಿ ೧೦೬ ಮಹಿಳಾ ಫಲಾನುಭವಿಗಳಿಗೆ ಕರ್ನಾಟಕ ಕುಕ್ಕುಟ ಮಹಾಮಂಡಳಿ ವತಿಯಿಂದ ನಾಟಿ ಕೋಳಿ ಮರಿ ಗಳನ್ನು ವಿತರಿಸಲಾಯಿತು. ಪೊನ್ನಂಪೇಟೆ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ತಾಲೂಕು ಪಶು ವೈದ್ಯಾಧಿಕಾರಿ ಡಾ. ಶಾಂತೇಶ್ ತಾಲೂಕಿನ ವಿವಿಧ ಭಾಗದ ಮಹಿಳೆಯರಿಗೆ ಇಲಾಖೆ ವತಿಯಿಂದ ಉಚಿತವಾಗಿ ತಲಾ ೨೦ ಕೋಳಿ ಮರಿಗಳನ್ನು ೧೦೬ ಮಹಿಳೆಯರಿಗೆ ವಿತರಿಸಿದರು.
ಮೈಸೂರು ವಿಭಾಗೀಯ ಮಟ್ಟದ ಸಹಾಯಕ ನಿರ್ದೇಶಕ, ಕಕ್ಕುಟ ಮಹಾಮಂಡಳ ಮೈಸೂರಿನ ಡಾ. ಆನಂದ್ಕುಮಾರ್ ಮಾತನಾಡಿ, ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ಮೈಸೂರು ವಿಭಾಗ ಮಟ್ಟದಲ್ಲಿ ೮ ಜಿಲ್ಲೆಗಳಿಗೆ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ೬೨೦೦ ಫಲಾನುಭವಿಗಳನ್ನು ಮೈಸೂರು ವಿಭಾಗ ಮಟ್ಟದಲ್ಲಿ ಗುರುತಿಸಲಾಗಿದ್ದು ಗ್ರಾಮೀಣ ಮಹಿಳೆಯರು ಕೋಳಿ ಸಾಕಾಣೆಯ ಮೂಲಕ ತಮ್ಮ ಅಭಿವೃದ್ಧಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ. ಭವಿಷ್ಯ ಕುಮಾರ್, ಡಾ. ಚಂದ್ರಶೇಖರ್, ಗ್ರಾ.ಪಂ. ಸದಸ್ಯರಾದ ಮೂಕಳೇರ ಮಧುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.