ಕಣಿವೆ, ಅ. ೧೫: ಮೂಲ ದಾಖಲೆಗಳಿಂದ ವಂಚಿತರಾಗಿರುವ ಅರಣ್ಯದಂಚಿನ ಜನರಿಗೆ ದಾಖಲೆ ಗಳನ್ನು ಒದಗಿಸಲು ನಂಜರಾಯ ಪಟ್ಟಣ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿಶೇಷ ಶಿಬಿರವನ್ನು ತಾ. ೨೭ ರಂದು ಹಮ್ಮಿಕೊಳ್ಳಲಾಗುವುದು ಎಂದು ಪ್ರಬಾರ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.

ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ವತಿಯಿಂದ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಆದೇಶದನ್ವಯ ಹಳ್ಳಿಗಳ ಕಡೆಗೆ ಸರ್ಕಾರವೇ ಬಂದು ಜನ ಸಾಮಾನ್ಯರ ಸಮಸ್ಯೆ ಆಲಿಸಿ, ಆ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದು ಉತ್ತಮ ವೇದಿಕೆ; ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ತೂಗು ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ನುಡಿದರು.

ನಿವೇಶನ ರಹಿತ ಫಲಾನುಭವಿಗಳು ನಿವೇಶನ ರಹಿತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಬಿಟ್ಟು ಹೋಗಿದ್ದಲ್ಲಿ ನಿವೇಶನ ರಹಿತರ ಪಟ್ಟಿಗೆ ನೋಂದಾಯಿಸಿಕೊಳ್ಳುವAತೆ ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಮಾತನಾಡಿ, ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯದ

(ಮೊದಲ ಪುಟದಿಂದ) ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಒಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಆಯುಷ್ಮಾನ್ ಭಾರತ್ ಆರೋಗ್ಯ ಅಕೌಂಟ್ (ಎಬಿಎಚ್‌ಎ/ಅಭಾ) ಕಾರ್ಡ್ ಯೋಜನೆ ಆರಂಭಿಸಿದೆ. ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಅಭಾ ಕಾರ್ಡ್ ನೋಂದಣಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡುದಾರರಿಗೆ ೫ ಲಕ್ಷದವರೆಗಿನ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್ದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.೩೦ ರಷ್ಟು ರಿಯಾಯಿತಿಯು ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ನಿಂದ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಕಾಡಾನೆಗಳನ್ನು ನಿಗ್ರಹಿಸಲು ಅರಣ್ಯ ಇಲಾಖೆ ನಿರ್ವಹಿಸಿರುವ ರೈಲು ಕಂಬಿಗಳ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು.. ನಂಜರಾಯಪಟ್ಟಣ, ವಿರೂಪಾಕ್ಷಪುರ ವ್ಯಾಪ್ತಿಯಲ್ಲಿ ಕಳೆದ ೩೦ ವರ್ಷಗಳಿಂದ ವಾಸ ಇರುವ ಫಲಾನುಭವಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಗಮನಸೆಳೆದರು.

ಪ್ರಮುಖರಾದ ಆರ್.ಕೆ.ಚಂದ್ರ ಮಾತನಾಡಿ ದುಬಾರೆಯಿಂದ ಆನೆ ಶಿಬಿರಕ್ಕೆ ಹೋಗಲು ತೂಗು ಸೇತುವೆಯನ್ನು ನಿರ್ಮಿಸಬೇಕು. ಇದರಿಂದ ಆ ಭಾಗದಲ್ಲಿ ವಾಸಿಸುವ ಗಿರಿಜನರಿಗೆ ಹಾಗೂ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಇನ್ನಿತರ ಚಟುವಟಿಕೆಗಳಿಗೆ ಸಹಕಾರಿ ಆಗಲಿದೆ ಎಂದು ತಿಳಿಸಿದರು.

ರೈತರ ಉಪಯೋಗಕ್ಕಾಗಿ ನಿರ್ಮಿಸಲಾದ ಚಿಕ್ಲಿಹೊಳೆ ಜಲಾಶಯದಿಂದ ಪ್ರಸ್ತುತ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಗಿರಿಜನ ಮಕ್ಕಳಿಗೆ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕಾವೇರಿ ನೀರಾವರಿ ನಿಗಮದ ಕಿರಣ್ ಮಾತನಾಡಿ ಭತ್ತ ಬೆಳೆಗೆ ರೂಪುಗೊಂಡ ಚಿಕ್ಲಿಹೊಳೆ ಜಲಾಶಯ ಪ್ರಸ್ತುತ ಕಾಫಿ ಭತ್ತ ಇನ್ನಿತರ ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ ಪ್ರಕಾಶ್ ಅವರು ಭೂ ದಾಖಲೆಗಳಿಗೆ ಸಂಬAಧಿಸಿದAತೆ ಹಲವು ಮಾಹಿತಿ ನೀಡಿದರು. ಜೊತೆಗೆ ರಾಫ್ಟಿಂಗ್‌ಗೆ ಸಂಬAಧಿಸಿದAತೆ ಸ್ಥಳ ಪರಿಶೀಲಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮೊದಲು ಹೊಸ ಪಟ್ಟಣ ಸಮುದಾಯ ಭವನದ ಪಕ್ಕದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆ ಅವರಿಂದ ಅಂಗನವಾಡಿ ಸ್ಥಿತಿಗತಿ, ಮಕ್ಕಳ ಪೋಷಣೆ ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.. ಕಂದಾಯ ಇಲಾಖೆ ವತಿಯಿಂದ ವೃದ್ಯಾಪ್ಯ ವೇತನ ಮಂಜೂರಾತಿ ಪತ್ರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಎಂ.ಪ್ರಕಾಶ್, ಗಣಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ, ಸಮಗ್ರ ಗಿರಿಜನ ಅಭಿವೃದ್ದಿ ಅಧಿಕಾರಿ ಹೊನ್ನೇಗೌಡ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಜಿಪಂ ಇಇ ನಾಗೇಂದ್ರಪ್ಪ, ನಂಜರಾಯಪಟ್ಟಣ ಗ್ರಾಪಂ ಉಪಾಧ್ಯಕ್ಷೆ ಸಮೀರಾ, ಕುಶಾಲನಗರ ಉಪತಹಶೀಲ್ದಾರ್ ಮಧುಸೂದನ್, ಕಂದಾಯಾಧಿಕಾರಿ ಹೆಚ್.ಎಸ್. ಸಂತೋಷ್, ನಂಜರಾಯಪಟ್ಟಣ ಗ್ರಾ.ಪಂ.ಉಪಾಧ್ಯಕ್ಷೆ ಸಮೀರಾ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಕೇಶ್, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇತರರು ಇದ್ದರು.