ಸೋಮವಾರಪೇಟೆ, ಅ. ೧೫: ಗುಜರಾತ್ನಲ್ಲಿ ಮುಕ್ತಾಯಗೊಂಡ ೩೬ನೇ ನ್ಯಾಷನಲ್ ಗೇಮ್ಸ್ನಲ್ಲಿ ಕರ್ನಾಟಕ ಹಾಕಿ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕಕ್ಕೆ ಭಾಜನರಾದ ಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ ಎನ್.ಎಂ. ಸೂರ್ಯ ಅವರನ್ನು ಪಟ್ಟಣದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.
ಗುಜರಾತ್ನಲ್ಲಿ ನಡೆದ ೩೬ನೇ ನ್ಯಾಷನಲ್ ಗೇಮ್ಸ್ನಲ್ಲಿ ಭಾಗಿಯಾಗಿದ್ದ ಕರ್ನಾಟಕ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಸೋಮವಾರಪೇಟೆಯ ಸೂರ್ಯ, ಇಂದು ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಾಗತಿಸಲಾಯಿತು.
ಸೃಷ್ಟಿಯ ಚಿಗುರು ಕವಿಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್, ನ.ಲ. ವಿಜಯ, ಬ್ಲೂ ಸ್ಟಾರ್ ಹಾಕಿ ಕ್ಲಬ್ ಅಧ್ಯಕ್ಷ ಯಶವಂತ್, ಸದಸ್ಯರಾದ ಅಭಿಷೇಕ್ ಗೋವಿಂದಪ್ಪ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂಜೀವ, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಕರವೇ ಅಧ್ಯಕ್ಷ ದೀಪಕ್, ಯುವ ಒಕ್ಕೂಟದ ಸ್ಥಾಪಕಾಧ್ಯಕ್ಷ ಉದಯಕುಮಾರ್, ಪ.ಪಂ. ಸದಸ್ಯ ಮೃತ್ಯುಂಜಯ, ವಕೀಲ ಲಿಂಗಪ್ಪ, ಯೋಗೇಶ್ ಸೇರಿದಂತೆ ಇತರರು ಸ್ವಾಗತಿಸಿದರು.
೩೬ನೇ ನ್ಯಾಷನಲ್ ಗೇಮ್ಸ್ನಲ್ಲಿ ಕರ್ನಾಟಕ ಹಾಕಿ ತಂಡವನ್ನು ಪ್ರತಿನಿಧಿಸಿ, ಉತ್ತರ ಪ್ರದೇಶದ ವಿರುದ್ಧ ಜಯಗಳಿಸಿ ಚಿನ್ನ ಗೆದ್ದಿರುವ ಎನ್.ಎಂ. ಸೂರ್ಯ, ಪಟ್ಟಣದ ಮಹದೇಶ್ವರ ಬಡಾವಣೆಯ ನಲ್ಲುಲ್ಲಿ ಮೋಹನ್ ಮತ್ತು ಶೋಭಾ ದಂಪತಿಯ ಪುತ್ರ.