ಶ್ರೀಮಂಗಲ, ಅ. ೧೫: ಬಿರುನಾಣಿಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು, ಸಾರ್ವಜನಿಕರ ಅಹವಾಲನ್ನು ಆಲಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಾಯಪಂಡ ಸುನಿಲ್ ಅವರು ಸಂಸದರಲ್ಲಿ ಕೊಡವ ಜನಾಂಗಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ಪಡೆಯುವ ಬಗ್ಗೆ ಲೋಕಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅವರು ಕೊಡವರು ಮುಂದುವರಿದ ಜನಾಂಗವಾಗಿದ್ದು, ಬುಡಕಟ್ಟು ಜನಾಂಗದ ಗುಣಲಕ್ಷಣವನ್ನು ಹೊಂದಿಲ್ಲ. ಕಾಡಿನಲ್ಲಿ ವಾಸವಿರುವಂತಹ ನಿರ್ದಿಷ್ಟವಾದ ಗುಣಲಕ್ಷಣ ಇಲ್ಲದೆ ಇರುವುದರಿಂದ ಬುಡಕಟ್ಟು ಜನಾಂಗದ ಸ್ಥಾನಮಾನವನ್ನು ನೀಡಲು ಕಷ್ಟಸಾಧ್ಯವಾಗಲಿದೆ. ಕೊಡವ ಜನಾಂಗಕ್ಕೆ ಅದರ ಬದಲು ಪಾರ್ಸಿ ಜನಾಂಗಕ್ಕೆ ನೀಡಿದಂತೆ ಜಿಯೋ ಪಾರ್ಸಿ ಮಾದರಿಯಲ್ಲಿ ಕೊಡವರಿಗೆ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ ಬೇಕಾಗಿದೆ ಎಂದು ಹೇಳಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಅವರು ಕೊಡವರಿಗೆ ಬುಡಕಟ್ಟು ಜಾತಿ ಸ್ಥಾನಮಾನದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಯಪಂಡ ಸುನಿಲ್ ಅವರು ರಾಜಸ್ಥಾನದಲ್ಲಿ ಮೀನಾ ಜನಾಂಗ ಸಾಕಷ್ಟು ಮುಂದುವರಿದ ಜನಾಂಗವಾಗಿದೆ. ಹಾಗೆಯೇ ಹಿಮಾಚಲ್ ಪ್ರದೇಶದಲ್ಲಿ ಗಡ್ವಾಲ್ ಜನಾಂಗ ಬುಡಕಟ್ಟು ಜನಾಂಗದ ಸ್ಥಾನಮಾನವನ್ನು ನೀಡಿರುವ ಬಗ್ಗೆ ಪ್ರಸ್ತಾಪಿಸಿದರು. ಇವರೆಡು ಜನಾಂಗವು ಸಹ ಕೊಡವರಂತೆ ಇರುವ ಜನಾಂಗವಾಗಿದ್ದು, ಬುಡಕಟ್ಟು ಜನಾಂಗದ ಗುಣಲಕ್ಷಣ ಹೊಂದಿದ್ದಾರೆ ಎಂದು ಪ್ರಶ್ನಿಸಿದರು.
ಪರಕಟಕೇರಿ ಗ್ರಾಮದ ಕರ್ತಮಾಡ ಸುಜು ಅವರು ಬಿರುನಾಣಿ ವ್ಯಾಪ್ತಿಯಲ್ಲಿ ಸರಿಯಾಗಿ ಮೊಬೈಲ್ ದೂರವಾಣಿ ಸಿಗುತ್ತಿಲ.್ಲ ಇಂಟರ್ನೆಟ್ ಸಮಸ್ಯೆ ಸಹ ಇದೆ. ಗುಡ್ಡಗಾಡು ಪ್ರದೇಶ ವಾಗಿರುವುದರಿಂದ ಇಲ್ಲಿಗೆ ಇಂಟರ್ನೆಟ್ ಸಹಿತ ಉತ್ತಮ ದೂರವಾಣಿ ಟವರ್ಗಳನ್ನು ಸ್ಥಾಪಿಸುವಂತೆ ಮನವಿ ಮಾಡಿದರು.
ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣಿರ ಹರೀಶ್ ಮಾದಪ್ಪ ಮಾತನಾಡಿ, ೨೦೨೦ರಿಂದ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಬೆಳೆ ನಷ್ಟ ಪರಿಹಾರ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿಲ್ಲ. ಅದನ್ನು ಪರಿಷ್ಕರಣೆ ಮಾಡಬೇಕು. ೨೦೨೦ರಲ್ಲಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಪ್ರಾಕೃತಿಕ ವಿಕೋಪ ಅಧ್ಯಯನ ತಂಡಕ್ಕೆ ಬೆಳೆಗಾರರ ಒಕ್ಕೂಟ ನೀಡಿರುವ ಮನವಿಯಂತೆ ಹೆಕ್ಟೇರ್ಗೆ ರೂ. ೫೦ ಸಾವಿರ ಬೆಳೆ ನಷ್ಟ ಪರಿಹಾರ ಹಾಗೂ ಕನಿಷ್ಟ ೫ ಹೆಕ್ಟೇರ್ವರೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದನ್ನು ಜಾರಿಗೆ ತರುವಂತೆ ಸಂಸದರಲ್ಲಿ ಮನವಿ ಮಾಡಿದರು.
ರೈತ ಸಂಘದ ಮಿದೇರಿರ ಕವಿತಾ ಅವರು ಮತ್ತು ಮಲ್ಲೇಂಗಡ ಅಶೋಕ್ ಅವರು ಕೊಡಗು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರವಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಮಾಡಿದರು.